ಟನ್‌ಗೆ 3200 ರೂ. ದರ ನಿಗದಿ ಮಾಡಿ

7 KLG 2
Published on

ಕಲಘಟಗಿ: ಅತಿವೃಷ್ಟಿಯಿಂದಾಗಿ ಬೆಳೆಗಳೆಲ್ಲ ನಾಶವಾಗಿದ್ದು, ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕಾರ್ಖಾನೆಯವರು ಕಬ್ಬಿಗೆ 3200 ರೂ. ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಎಂದು ತಾಲೂಕಿನ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕಬ್ಬು ಬೆಳೆಗಾರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ಬೆಳೆಗಾರರು ಒಕ್ಕೊರಲಿನಿಂದ ಆಗ್ರಹಿಸಿದರು. ಕಬ್ಬು ಖರೀದಿಸುವ ಕಾರ್ಖಾನೆಗಳು ಲಾಭದಲ್ಲಿಯೇ ಇವೆ. ಆದರೆ, ರೈತರಿಗೆ ಹೆಚ್ಚಿನ ದರ ನೀಡುವಲ್ಲಿ ಹಿಂದೇಟು ಹಾಕುತ್ತಿವೆ. ಆದ್ದರಿಂದ ಈ ವರ್ಷ ಹೆಚ್ಚಿನ ದರ ನೀಡುವ ಕಾರ್ಖಾನೆಗಳಿಗೆ ಕಬ್ಬು ಕಳಿಸುವುದಾಗಿ ರೈತರು ತಿಳಿಸಿದರು.

ಈಗಾಗಲೇ ಹಳಿಯಾಳ ಪ್ಯಾರಿ ಶುಗರ್ ಕಾರ್ಖಾನೆಯವರು ಪ್ರತಿ ಟನ್‌ಗೆ 2950 ರೂ. ದರ ನಿಗದಿ ಮಾಡಿ ಕಬ್ಬು ಕಟಾವು ಮಾಡಲು ಅನುಮತಿ ನೀಡಿದೆ. ಉಳಿದ ಕಾರ್ಖಾನೆಯವರು ಬೆಲೆ ನಿಗದಿ ಮಾಡಬೇಕು ಹಾಗೂ ಕಬ್ಬು ಕಟಾವು ಆಗಿ ಕಾರ್ಖಾನೆ ಪ್ರವೇಶಿಸಿದ ಕೂಡಲೇ ತೂಕವಾಗಬೇಕು. ತಡವಾದಲ್ಲಿ ಕಬ್ಬಿನ ಇಳುವರಿಯಲ್ಲಿ ಏರುಪೇರು ಆಗುತ್ತದೆ ಎಂದರು.

ತಹಸೀಲ್ದಾರ್ ವೀರೇಶ ಮುಳಗುಂದಮಠ ಮಾತನಾಡಿ, ಸಭೆಗೆ ಆಗಮಿಸಿದ ಎಲ್ಲ ಕಾರ್ಖಾನೆಯವರು ನಿಮ್ಮ ಕಂಪನಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ರೈತರ ಬೇಡಿಕೆಯಂತೆ ಟನ್‌ಗೆ 3200 ರೂ. ದರ ನಿಗದಿ ಮಾಡಿಕೊಂಡು ಕಟಾವಿಗೆ ಅನುಮತಿ ಪಡೆದುಕೊಳ್ಳಿ ಹಾಗೂ ತೂಕದಲ್ಲಿ ಲೋಪದೋಷ ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ನಿಜಗುಣಿ ಕೆಲಗೇರಿ ಮಾತನಾಡಿ, ಕಾರ್ಖಾನೆ ಅವರು ಕಬ್ಬು ಬೆಳೆಗಾರರ ಬಾಕಿಯನ್ನು ಕೂಡಲೇ ಪಾವತಿಸಬೇಕು ಎಂದರು.

ಕಬ್ಬು ಬೆಳೆಗಾರ ಸಂಘದ ಮುಖಂಡರಾದ ನಿಜುಗುಣಿ ಕೆಲಗೇರಿ, ಉಳವಪ್ಪ ಬಳಿಗೇರ, ನಾಗೇಶ ಇಟಗಿ, ವಸಂತ ಡಾಖಪ್ಪನವರ, ಸಿದ್ದಯ್ಯ ಕಟ್ನೂರಮಠ, ಈಶ್ವರ ಜಾಯನಗೌಡ್ರ, ಬಸವರಾಜ ರೊಟ್ಟಿ, ಅಣ್ಣಪ್ಪ ಸುಬ್ಬಣ್ಣವರ, ಶಂಭು ಬಳಿಗೇರ, ಮಂಜಯ್ಯ ಅಣ್ಣಿಗೇರಿ, ಶರಣಯ್ಯ ಬನ್ನಿಕೊಪ್ಪಮಠ, ಬಸವರಾಜ ಹಟಿಗಾರ, ಮಹೇಶ ಬೆಳಗಾವ್ಕರ್, ಬಸನಗೌಡ ಸಿದ್ದನಗೌಡ್ರ, ಶಂಕ್ರಪ್ಪ ತಿಪ್ಪಣ್ಣವರ, ಗಿರೀಶ ಸೂರ್ಯವಂಶಿ, ಪ್ರವೀಣ ಅರ್ಕಸಾಲಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net