

ಹಿರೀಸಾವೆ: ಚನ್ನರಾಯಪಟ್ಟಣ ತಾಲೂಕಿನ 32 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ಮಾರ್ಟ್(ಡಿಜಿಟಲ್) ಬೋರ್ಡ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಅನಿಲ್ ಮಾಹಿತಿ ನೀಡಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಹಾಗೂ ಶಾಸಕರ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಪ್ರತ್ಯೇಕವಾಗಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಮನೆಯ ವಿದ್ಯಾರ್ಥಿಗಳ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಪ್ರಾರಂಭಿಸಲಾಗವುದು. ಶಿಕ್ಷಣ ಇಲಾಖೆ ಹಾಗೂ ಸೇಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ಎಂಬ ಎನ್‌ಜಿಒ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಒಂದು ಸ್ಮಾರ್ಟ್ ಬೋರ್ಡ್‌ಗೆ 1.80 ಲಕ್ಷ ರೂ. ವೆಚ್ಚ ತಗಲಲಿದೆ. ಸೋಲಾರ್ ವಿದ್ಯುತ್ ನಿಂದ ಸ್ಮಾರ್ಟ್ ಬೋರ್ಡ್ ಕಾರ್ಯ ನಿರ್ವಹಿಸಲಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತೃ ಭಾಷೆ ಜತೆಗೆ ಆಂಗ್ಲ ಮಾಧ್ಯಮದ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಅರ್ಚಕರ ಮಾರ್ಗದರ್ಶನಂತೆ ಶಾರದಾ ಪೂಜೆ ಮಾಡುವ ಮೂಲಕ ಮಕ್ಕಳ ಮನೆಯ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳ ಕೈಯಿಂದ ಅಕ್ಕಿಯ ಮೇಲೆ ಪಾಲಕರು ಅಕ್ಷರ ಬರೆಸಿದರು.
ಶಿಕ್ಷಣ ಸಂಯೋಜಕ ರವೀಂದ್ರ, ಕಸಾಪ ಹೋಬಳಿ ಅಧ್ಯಕ್ಷ ಪ್ರಮೋದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಸದಸ್ಯರಾದ ಮಹೇಶ್, ಬೋರಣ್ಣ, ಸಿಆರ್‌ಪಿಗಳಾದ ಪುಟ್ಟಸ್ವಾಮಿ, ಮಂಜನಾಥ್, ಎರಡೂ ಶಾಲೆಗಳ ಎಡಿಎಂಸಿ ಅಧ್ಯಕ್ಷರಾದ ಸಿಮಾ ಲೋಕೇಶ್, ಮಧು, ಮುಖ್ಯಶಿಕ್ಷಕರಾದ ಉಮಾ, ಚಂದ್ರಕಲಾ ಹಾಗೂ ಶಿಕ್ಷಕರ ಸಂಘದ ಮಂಜೇಗೌಡ, ಹಿರಿಯಣ್ಣ ಇತರರು ಪಾಲ್ಗೊಂಡಿದ್ದರು.