

ಸಂತೋಷ ವೈದ್ಯ ಹುಬ್ಬಳ್ಳಿ
ಹು-ಧಾ ಮಹಾನಗರ ಪಾಲಿಕೆಯು 2020-21ನೇ ಸಾಲಿಗೆ 31.93 ಲಕ್ಷ ರೂ. ಉಳಿತಾಯ ಬಜೆಟ್ ರೂಪಿಸಿದ್ದು, ಪ್ರಾದೇಶಿಕ ಆಯುಕ್ತರ ಅನುಮೋದನೆ ಪಡೆಯಲಾಗಿದೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ಮಂಡನೆಯಾದ ಬಜೆಟ್ ಇದು.
2019ರ ಮಾರ್ಚ್ 6ರಂದೇ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಕೊನೆಗೊಂಡಿತ್ತು. ಮಾ. 1(2019)ರಂದು ಪಾಲಿಕೆ ಸದಸ್ಯರು 2019-20ನೇ ಸಾಲಿನ ಬಜೆಟ್ ಮಂಡಿಸಿದ್ದರು. 2020-21ನೇ ಸಾಲಿನ ಬಜೆಟ್ಅನ್ನು ಪಾಲಿಕೆ ಅಧಿಕಾರಿಗಳು ರೂಪಿಸಿ ಪ್ರಾದೇಶಿಕ ಆಯುಕ್ತರ ಅನುಮೋದನೆಗೆ ಕಳುಹಿಸಿಕೊಟ್ಟಿದ್ದರು.
ಈ ಬಜೆಟ್ನಲ್ಲಿ ಯಾವುದೇ ಜನಪ್ರಿಯ ಯೋಜನೆಗಳು ಇಲ್ಲ. ಆದಾಯ ಮತ್ತು ವೆಚ್ಚದ ಲೆಕ್ಕಾಚಾರವಿದು. ರಾಜಸ್ವ ಖಾತೆಯಲ್ಲಿ 472.77 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. 354.37 ಕೋ. ರೂ. ವೆಚ್ಚ ತೋರಿಸಲಾಗಿದೆ. ಬಂಡವಾಳ ಖಾತೆಯಲ್ಲಿ ಸರ್ಕಾರದಿಂದ 194.95 ಕೋ. ರೂ. ನಿರೀಕ್ಷಿಸಲಾಗಿದೆ. ಆದರೆ, ಇಲ್ಲಿ ವಿವಿಧ ಕಾಮಗಾರಿಗಳಿಗೆ 337.61 ಕೋ.ರೂ. ಪಾವತಿಸಬೇಕಿದೆ. ಅಸಾಮಾನ್ಯ ಖಾತೆಯಡಿ 84.64 ಕೋ. ರೂ. ಸರ್ಕಾರದಿಂದ ಬರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ 65.37 ಕೋ. ರೂ. ಪಾವತಿಸಬೇಕಾಗಬಹುದು ಎಂದು ಬಜೆಟ್ನಲ್ಲಿ ತೋರಿಸಲಾಗಿದೆ. ಆರಂಭದ ಶಿಲ್ಕು 5.30 ಕೋಟಿ ರೂ. ಇದ್ದವು.
ಪಾಲಿಕೆಗೆ ಕರದಾತರಿಂದ ಬರಬಹುದಾದ ಬಹು ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆ. 2020-21ನೇ ಸಾಲಿಗೆ ಆಸ್ತಿ ತೆರಿಗೆಯಿಂದ ಹಿಂದಿನ ಬಾಕಿ ಸೇರಿ 78.89 ಕೋ. ರೂ. ಆದಾಯ ನಿರೀಕ್ಷಿಸಲಾಗಿದೆ. ಕಳೆದ ಸಾಲಿನಲ್ಲಿ 69.97 ಕೋ. ರೂ. ಅಂದಾಜಿಸಲಾಗಿತ್ತು. ಆದರೆ, ಮಾ. 5, 2020ರವರೆಗೆ 55.35 ಕೋ. ರೂ. ಸಂಗ್ರಹಿಸಲಾಗಿದೆ. ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಮುಕ್ತಾಯ ಪ್ರಮಾಣ ಪತ್ರದಿಂದ 10.02 ಕೋ.ರೂ., ಘನ ತ್ಯಾಜ್ಯ ವಿಲೇವಾರಿ ಶುಲ್ಕದಿಂದ 21.37 ಕೋ.ರೂ., ಮಾರುಕಟ್ಟೆ ಶುಲ್ಕದಿಂದ 3.36 ಕೋ.ರೂ., ಜಾಹೀರಾತು ಕರದಿಂದ 4.18 ಕೋ. ರೂ. ಅದಾಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸಾಮಾನ್ಯ ಆಡಳಿತಕ್ಕೆ 52.09 ಕೋ.ರೂ., ಸಾಮಾನ್ಯ ಆಡಳಿತ ಕೌನ್ಸಿಲ್ಗೆ 12.59 ಕೋ.ರೂ., ಯೋಜನಾ ಶಾಖೆಗೆ 2.02 ಕೋ.ರೂ., ಸಾರ್ವಜನಿಕ ಕಾಮಗಾರಿಗೆ 11.60 ಕೋ.ರೂ., ಬೀದಿ ದೀಪಗಳ ನಿರ್ವಹಣೆಗೆ 31.53 ಕೋ.ರೂ., ಸಾರ್ವಜನಿಕ ಆರೋಗ್ಯಕ್ಕೆ 52.98 ಕೋ.ರೂ., ವೈದ್ಯಕೀಯ ಸೇವೆಗೆ 9.33 ಕೋ.ರೂ., ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಗೆ 96.32 ಕೋ.ರೂ., ನೀರು ಪೂರೈಕೆಗೆ 35.26 ಕೋ. ರೂ. ಹಂಚಿಕೆ ಮಾಡಲಾಗಿದೆ.
ಪಾಲಿಕೆಯ 2020-21ನೇ ಸಾಲಿನ ಬಜೆಟ್ಗೆ ಆಡಳಿತಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರು ಅನುಮೋದನೆ ನೀಡಿದ್ದು, ಸರ್ಕಾರಕ್ಕೆ ಕಳುಹಿಸಿದ್ದೇವೆ. | ಡಾ. ಸುರೇಶ ಇಟ್ನಾಳ ಹುಧಾಮಪಾ ಆಯುಕ್ತ
ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಅವಕಾಶ: ಪ್ರಸಕ್ತ ಆರ್ಥಿಕ ವರ್ಷದೊಳಗೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರಕ್ಕೆ ಬಂದರೆ ಅಧಿಕಾರಿಗಳ ಬಜೆಟ್ ಬದಲು ಪರಿಷ್ಕೃತ ಅಥವಾ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಅವಕಾಶವಿದೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೆ 1 ವರ್ಷ ಕಳೆದು ಹೋಗಿದೆ. ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ವರ್ಗೀಕರಣ ಬಗ್ಗೆ ಕೆಲ ಮಾಜಿ ಸದಸ್ಯರು ಹಾಗೂ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಚುನಾವಣೆ ವಿಳಂಬವಾಗಿದೆ. ಇದೀಗ ಕರೊನಾ ಸೋಂಕಿನಿಂದ ಎಲ್ಲವೂ ಸ್ತಬ್ಧವಾಗಿರುವುದರಿಂದ ಚುನಾವಣೆ ನಡೆಸುವುದಿರಲಿ, ಅದರ ಬಗ್ಗೆ ಯೋಚಿಸಲೂ ಸಮಯವಿಲ್ಲ. ಹಾಗೊಂದು ವೇಳೆ ಚುನಾವಣೆ ನಡೆದರೂ ಅಷ್ಟರೊಳಗೆ ಅರ್ಥಿಕ ವರ್ಷದ ಅಂತ್ಯ ಸಮೀಪಿಸಿರುತ್ತದೆ.