

ಹುಕ್ಕೇರಿ: ಜಿಲ್ಲೆಯ ಜನರ ಗಮನ ಸೆಳೆದಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಸೆ.೨೮ರಂದು ಜರುಗಲಿದೆ. ಹೊಂದಾಣಿಕೆ ರಾಜಕಾರಣದಿಂದ ಹೊರಬಂದು ಮುಖಂಡರು ಇದೀಗ ಜನರ ಬಳಿ ಮತಯಾಚನೆಗೆ ತೆರಳುವಂತಾಗಿದೆ. ಸೋಮವಾರ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾಗಿತ್ತು. ಚುನಾವಣಾ ಕಣದಲ್ಲಿ ೧೫ ಸ್ಥಾನಗಳಿಗೆ ೩೨ ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ಸಲ್ಲಿಸಿದ್ದ ೧೧೫ ಅಭ್ಯರ್ಥಿಗಳಲ್ಲಿ ೮೩ ಜನ ನಾಮಪತ್ರ ವಾಪಸ್ ಪಡೆದರು. ೯ ಸ್ಥಾನಕ್ಕೆ ಸಾಮಾನ್ಯ ೨೦, ೨ ಸ್ಥಾನಕ್ಕೆ ನಾಲ್ವರು ಮಹಿಳೆಯರು, ಹಿಂದುಳಿದ ಅ ಕ್ಷೇತ್ರದ ೧ ಸ್ಥಾನಕ್ಕೆ ಇಬ್ಬರು, ಹಿಂದುಳಿದ ಬ ವರ್ಗದ ೧ ಸ್ಥಾನಕ್ಕೆ ಇಬ್ಬರು, ಪರಿಶಿಷ್ಟ ಜಾತಿ/ ಪಂಗಡದ ಒಂದೊಂದು ಸ್ಥಾನಕ್ಕೆ ಇಬ್ಬರು ಸ್ಪಂದಿಸಿದ್ದಾರೆ. ಚುನಾವಣೆ ಜಾರಕಿಹೊಳಿ, ಜೊಲ್ಲೆ ಮತ್ತು ಕತ್ತಿ, ಎ.ಬಿ.ಪಾಟೀಲ ಬಣದ ನಡುವೆ ಪ್ರತಿಷ್ಠೆಗೆ ಕಾರಣವಾಗಿದೆ.
ಈಗಾಗಲೇ ಹಗಲಿರುಳು ಎರಡೂ ಬಣದ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ನಾಮಪತ್ರ ವಾಪಸು ಪಡೆಯುವಾಗ ಎರಡು ಬಣಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆಂಬ ಉಹಾಪೋಹ ಜನರ ಚರ್ಚೆಗೆ ಗ್ರಾಸವಾಗಿತ್ತು. ಎರಡು ಬಣಗಳ ನಾಯಕರು ಹೊಂದಾಣಿಕೆ ಆಗಿಲ್ಲ. ಚುನಾವಣೆ ನಡೆಸಲು ನಿರ್ಧರಿಸಲಾಗಿದ್ದು, ವದಂತಿಗಳಿಗೆ ತೆರೆ ಬಿದ್ದಿದೆ.