

ಹಾಸನ: ಪ್ರತಿ ವರ್ಷದಂತೆ ಈವರ್ಷವೂ ಕೂಡ ಸರ್ಕಾರಿ ಶಾಲೆಯನ್ನು ಮೇ 31ರಿಂದ ಆರಂಭಿಸುತ್ತಿದ್ದು, ಅಂದಿನಿಂದ ಜೂನ್ 3ರವರೆಗೂ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಎಸ್. ಪ್ರಕಾಶ್ ತಿಳಿಸಿದರು.
ಶಾಲೆ ಪ್ರಾರಂಭೋತ್ಸವ ಕುರಿತು ತಮ್ಮ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಪ್ರಕಾಶ್, ಈಗಾಗಲೇ 2022-23ರ ಶಾಲೆಯ ಪರೀಕ್ಷೆ ಮುಗಿದು ಫಲಿತಾಂಶ ಹೊರಬಂದಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಆರಂಭವಾಗುತ್ತಿದೆ. ಶಿಕ್ಷಕರು ಶಾಲೆ ಹಾಗೂ ಶಾಲೆಯ ಪರಿಸರ ಸ್ವಚ್ಛತೆ ಮತ್ತು ಇನ್ನಿತರ ಕಾರ್ಯಗಳನ್ನು ಮಾಡುವಲ್ಲಿ ಮುಂದಾಗಿದ್ದಾರೆ.
ಮೇ 31 ರಂದು ಶಾಲೆ ಪ್ರಾರಂಭವಾಗುವುದರಿಂದ ಎಲ್ಲ ಸರ್ಕಾರಿ ಶಾಲೆಯಲ್ಲಿ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. ಶಾಲೆಯನ್ನು ಹಸಿರು ತೋರಣಗಳಿಂದ ಅಲಂಕಾರ ಮಾಡಲು ಮುಖ್ಯ ಶಿಕ್ಷಕರು, ಶಿಕ್ಷಕರುಗಳಿಗೆ ಈಗಾಗಲೇ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಈ ಬಾರಿ ಶಾಲೆ ಪ್ರಾರಂಭವಾಗುವ ಮೊದಲೇ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಬಂದಿದ್ದು, ಮೊದಲ ದಿನವೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು. ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ದಾಖಲಾತಿ ಆಂದೋಲನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಸುಮಾರು 424 ಶಿಥಿಲಗೊಂಡ ಶಾಲಾ ಕಟ್ಟಡಗಳಿದ್ದು, 267 ಕಟ್ಟಡಗಳನ್ನು ನೆಲೆಸಮ ಮಾಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. 210 ಲಕ್ಷ ರೂ. ರಿಪೇರಿ ಅನುದಾನ ಬಿಡುಗಡೆಯಾಗಿದ್ದು ಸುಮಾರು 163 ಕೊಠಡಿಗಳ ರಿಪೇರಿ ಕೆಲಸವನ್ನು ಮಾಡಲಾಗುತ್ತಿದೆ. ಇನ್ನು 193 ಕೊಠಡಿಗಳು ನಿರ್ಮಾಣ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು