

ಬೆಂಗಳೂರು: ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಡಿ.19ರಿಂದ 31ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿಯವರ ನಿರ್ದೇಶನದ ಮೇರೆಗೆ ರಿಜಿಸ್ಟ್ರಾರ್ (ನ್ಯಾಯಾಂಗ) ಎಂ.ಚಂದ್ರಶೇಖರ್ ರೆಡ್ಡಿ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ರಜೆಯ ಅವಧಿಯಲ್ಲಿ ದೈನಂದಿಕ ಕಲಾಪಗಳು ನಡೆಯುವುದಿಲ್ಲ. ಆದರೆ, ತುರ್ತು ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರು ಪ್ರಧಾನ ಪೀಠದಲ್ಲಿ ಡಿ.20, 22, 27 ಮತ್ತು 29ರಂದು ರಜಾಕಾಲದ ಪೀಠಗಳು ಕಾರ್ಯನಿರ್ವಹಿಸಲಿವೆ. ಇನ್ನು ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಪೀಠದಲ್ಲಿ ನ್ಯಾಯಮೂರ್ತಿಗಳು ಭೌತಿಕ ವಿಚಾರಣೆ ನಡೆಸುವುದಿಲ್ಲ.
ಆ ಪೀಠಗಳಿಗೆ ಸಂಬಂಧಿಸಿದ ತುರ್ತು ಪ್ರಕರಣಗಳನ್ನು ಬೆಂಗಳೂರು ಪೀಠದಲ್ಲಿ ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಲಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ತಡೆಯಾೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಿದೆ. ಮೇಲ್ಮನವಿ, ಅರ್ಜಿ ಅಥವಾ ಮನವಿ ಮತ್ತು ಬೇರಾವುದೇ ಸಿವಿಲ್ ರೂಪದ ಪ್ರಕರಣಗಳನ್ನು ರಜಾಕಾಲದ ಪೀಠಗಳು ವಿಚಾರಣೆ ನಡೆಸುವುದಿಲ್ಲ.