ಮೈಸೂರು: ತಂಬಾಕು ಚಟದಿಂದ ಆಗುವ ದುಷ್ಪರಿಣಾಮ ಹಾಗೂ ಅದರಿಂದ ಹೊರಬರುವ ಕುರಿತಂತೆ ಮೇ 31ರಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯಿಂದ ‘ತಂಬಾಕು ಮುಕ್ತ ಸಮಾಜ ನಿರ್ಮಾಣ’ ಘೋಷ ವಾಕ್ಯದಂತೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯೆ ಡಾ.ಮಾಧವಿ ತಿಳಿಸಿದರು.
ಅಂದು ಬೆಳಗ್ಗೆ 7ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಡುವ ಜಾಥಾದಲ್ಲಿ ಸುಮಾರು 1200 ವಿದ್ಯಾರ್ಥಿಗಳು ವಿವಿಧ ಘೋಷಣೆಯ ಫಲಕ ಹಿಡಿದು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೀಡಿ, ಸಿಗರೇಟು, ಗುಟ್ಕಾ, ಜರ್ದಾದಂತಹ ತಂಬಾಕು ಚಟ ನೋವಿನಿಂದೊಡಗೂಡಿದ ಸಾವಿಗೆ ಕಾರಣವಾಗುತ್ತದೆ. ಅಲ್ಲದೆ ಅವರು ಮಾತ್ರವಲ್ಲ ಕುಟುಂಬದವರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಚಟ ತ್ಯಜಿಸುವುದು ಸೂಕ್ತ ಎಂಬ ಅರಿವು ಮೂಡಿಸಲಾಗುವುದು.
ವ್ಯಸನಕಾರಿಯಾಗಿರುವ ತಂಬಾಕಿನಲ್ಲಿನ ನಿಕೋಟಿನ್ ಎಂಬುವ ಅಂಶ ಉತ್ತೇಜಕದಂತೆ ಕೆಲಸ ಮಾಡಿ ಮನುಷ್ಯರನ್ನು ಅದರ ದಾಸರನ್ನಾಗಿಸುತ್ತದೆ. ತಂಬಾಕಿನಲ್ಲಿ ಸುಮಾರು 7 ಸಾವಿರ ರಾಸಾಯನಿಕ ಅಂಶಗಳಿದ್ದು, ಅದರಲ್ಲಿನ 70 ರಷ್ಟು ಅಂಶಗಳು ಕ್ಯಾನ್ಸರ್‌ಕಾರಗಳಾಗಿವೆ. ಬಾಯಿ, ಗಂಟಲು, ಅನ್ನನಾಳ, ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ನೇರ ಕಾರಕವಾಗಿರುವುದಲ್ಲದೇ ಜಠರ, ಮೂತ್ರಕೋಶ ಮುಂತಾದ ಕ್ಯಾನ್ಸಗಳು ಸಂಭವಿಸುತ್ತದೆ ಎಂದು ಎಚ್ಚರಿಸಿದರು.
ರಕ್ತದ ಒತ್ತಡ, ಹೃದಯಾಘಾತ, ಪಾರ್ಶ್ವವಾಯು, ಬಂಜೆತನ ಹೀಗೆ ಹತ್ತು ಹಲವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಈ ಎಲ್ಲ ಅನಾರೋಗ್ಯ ಸಮಸ್ಯೆಗಳು ವ್ಯಕ್ತಿಗತ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮ ಬೀರುವುದಲ್ಲದೆ, ಆರ್ಥಿಕತೆಯೂ ಕುಂಠಿತಗೊಳಿಸುತ್ತದೆ. 2011ರ ಅಂಕಿ ಅಂಶಗಳ ಪ್ರಕಾರ 30-69 ವರ್ಷ ವಯಸ್ಸಿನವರಲ್ಲಿ 983 ಕೋಟಿಯಷ್ಟು ತಂಬಾಕಿನ ದುಷ್ಪರಿಣಾಮಕ್ಕಾಗಿ ಆರ್ಥಿಕ ವ್ಯಯವಾಗಿದೆ. ಆದ್ದರಿಂದ ಜನತೆ ತಂಬಾಕು ಚಟದಿಂದ ದೂರವಿರಬೇಕೆಂದು ಮನವಿ ಮಾಡಿದರು.
ಆಸ್ಪತ್ರೆ ನಿರ್ದೇಶಕಿ ಅಂಜಲಿ ಅಜಯ್‌ಕುಮಾರ್, ವೈದ್ಯರಾದ ಡಾ. ವಿನಯ್ ಮುತ್ತಗಿ, ಡಾ. ರಕ್ಷಿತ್, ಡಾ. ಅಭಿಲಾಶ್ ಇದ್ದರು.