

ಚಿತ್ರದುರ್ಗ: ಹೊಸ ವರ್ಷಾಚರಣೆ ನೆಪದಲ್ಲಿ ಕುಡಿದು ಮತ್ತಿನಲ್ಲಿ ಉಂಟಾಗುವ ಅವಘಡಗಳನ್ನು ನಿಯಂತ್ರಿಸಲು ಜಿಲ್ಲಾ ರಕ್ಷಣಾ ಇಲಾಖೆ ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯ ಚೆಕ್‌ಪೋಸ್ಟ್ ಸೇರಿ ಎಲ್ಲೆಡೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನಿಧನದ ಹಿನ್ನೆಲೆಯಲ್ಲಿ 2025 ರ ಜನವರಿ 1ರವರೆಗೆ ಶೋಕಾಚರಣೆ ಜಾರಿಯಲ್ಲಿರುವ ಕಾರಣ ಹೊರ ಆವರಣಗಳಲ್ಲಿ ಸಂತೋಷಕೂಟಗಳನ್ನು ಆಯೋಜಿಸುವುದು, ಬಾರ್‌ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ ಹೊರಾಂಗಣದಲ್ಲಿ ಸಂಭ್ರಮಾಚರಣೆ ಹಾಗೂ ಡಿಜೆ ಬಳಕೆಗೆ ಅವಕಾಶವಿಲ್ಲ.
ಹೊರಾಂಗಣದಲ್ಲಿ ಯಾರಾದರೂ ಸಂಭ್ರಮಾಚರಣೆಗೆ ಮುಂದಾದರೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಬಾರ್ ಒಳಗೂ ಗೌಜುಗದ್ದಲಕ್ಕೆ ಅವಕಾಶ ಮಾಡಿಕೊಡದಂತೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರನ್ನು ಕೋರಲು, ನಿಗದಿ ಪಡಿಸಿದ ಸಮಯ ಮೀರಿ ವಹಿವಾಟು ನಡೆಸಿದರೆ ಹಾಗೂ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುವುದರ ವಿರುದ್ಧವೂ ಕ್ರಮ ಜರುಗಿಸಲು ಪೊಲೀಸ್ ಪಡೆ ಸಜ್ಜಾಗಿದೆ.
ಮದ್ಯ ಸೇವಿಸಿ ಎಲ್ಲೆಂದರಲ್ಲಿ ಗಲಾಟೆ ಮಾಡುವುದು, ಕೂಗಾಡುವುದು, ಮನಸೋ ಇಚ್ಛೆ ಬೈಕ್‌ಗಳನ್ನು ವೇಗವಾಗಿ ಓಡಿಸುವುದು, ಸೈಲೆನ್ಸರ್ ಕಿತ್ತು ಭಾರೀ ಶಬ್ಧ ಗಳೊಂದಿಗೆ ಬೈಕ್‌ಗಳನ್ನು ಅಡ್ಡಾದಿಡ್ಡಿ ಚಲಾಯಿಸುವುದು ಹಾಗೂ ಬೈಕ್ ವ್ಹೀಲಿಂಗ್ ನಡೆಸುವ ಕಿಡಿಗೇಡಿಗಳಿಗೆ ಕಡಿವಾಣ ಹಾಕುವಂತೆಯೂ ಪೊಲೀಸರಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ಸಭೆ: ಜಿಲ್ಲಾ ರಕ್ಷಣಾಧಿಕಾರಿ ನಿರ್ದೇಶನದ ಹಿನ್ನೆಲೆಯಲ್ಲಿ ಉಪವಿಭಾಗ ಹಾಗೂ ಠಾಣಾಮಟ್ಟದಲ್ಲಿ ಅಧಿಕಾರಿಗಳು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ. ಚಿತ್ರದುರ್ಗ ಉಪವಿಭಾಗಾಧಿಕಾರಿ ಪಿ.ಕೆ. ದಿನಕರ್ ಅವರು ಶುಕ್ರವಾರ ಉಪವಿಭಾಗ ವ್ಯಾಪ್ತಿಯ ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳ ಠಾಣಾಧಿಕಾರಿಗಳು, ಸಿಪಿಐಗಳ ಸಭೆ ನಡೆಸಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ನಿಗಾವಹಿಸಲು ಹಾಗೂ ಠಾಣಾ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಚೆಕ್‌ಪೋಸ್ಟ್ ನಿರ್ಮಿಸಿಕೊಂಡು ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕೋಟ್
ಶೋಕಾಚರಣೆ ಜಾರಿಯಲ್ಲಿರುವುದರಿಂದ ಡಿಜೆಗಳಿಗೆ, ಓಪನ್ ಪಾರ್ಟಿಗಳಿಗೆ ಅವಕಾಶವಿಲ್ಲ. ಡಿ.31ರಂದು ಸಂಜೆಯಿಂದಲೇ ಠಾಣಾ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳು ಕಾರ್ಯಾರಂಭ ಮಾಡಲಿವೆ. ಅಂದು ನೈಟ್ಸ್ ರೌಂಡ್ಸ್ ನಡೆಸುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ