ಜ. 31ರಿಂದ ಮೂರು ದಿನ ಮೆಣಸಿನಕಾಯಿ ಮೇಳ, ಹುಬ್ಬಳ್ಳಿ ಎಪಿಎಂಸಿ ಆವರಣದ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜನೆ

IMG_20250117_205249_777.jpg
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಧಾರವಾಡ ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಕುಂದಗೋಳದ ಅಮರಶಿವ ರೈತ ಉತ್ಪಾದಕ ಕಂಪನಿ ಇವುಗಳ ಸಂಯುಕ್ತಾಶ್ರಯದಲ್ಲಿ 13ನೇ ಒಣ ಮೆಣಸಿನಕಾಯಿ ಮೇಳವನ್ನು ಜ. 31ರಿಂದ ಮೂರು ದಿನಗಳವರೆಗೆ ನಗರದ ಎಪಿಎಂಸಿ ಬಳಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ ತಿಳಿಸಿದರು.

ಇಲ್ಲಿಯ ವಿದ್ಯಾನಗರದ ನೇಕಾರ ಭವನದಲ್ಲಿರುವ ಮಂಡಳಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಂದ ಗ್ರಾಹಕರಿಗೆ ನೇರವಾಗಿ ಉತ್ಪನ್ನ ತಲುಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಮೆಣಸಿನಕಾಯಿ ಬೆಳೆಗಾರರು, ಗ್ರಾಹಕರು, ವಿಜ್ಞಾನಿಗಳು ಮತ್ತು ಸಂಸ್ಕರಣಾದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು, ಮೆಣಸಿನಕಾಯಿ ಬೇಸಾಯದಲ್ಲಿನ ಇತ್ತೀಚಿನ ಸಂಶೋಧನಾ ಮಾಹಿತಿಯನ್ನು ಬೆಳೆಗಾರರಿಗೆ ತಲುಪಿಸುವುದು ಮತ್ತು ವಿವಿಧ ತಳಿಗಳು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದರು.

ಮೇಳದಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡಲು ಆಸಕ್ತ ರೈತರು ಪಹಣಿ ಹಾಗೂ ಆಧಾರ ಕಾರ್ಡ್ ನೊಂದಿಗೆ ಜನವರಿ 27ರೊಳಗೆ ಮಂಡಳಿ, ತೋಟಗಾರಿಕೆ ಇಲಾಖೆಯಲ್ಲಿ ಹೆಸರು ನೋಂದಾಯಿಸಬಹುದು.

ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಕರೊನಾ ಸಂದರ್ಭದಲ್ಲಿ ಮಾತ್ರ ಮೇಳ ಆಯೋಜಿಸಿಲ್ಲ. ಈ ವರ್ಷ ನೂರಕ್ಕೂ ಹೆಚ್ಚು ಮಳಿಗೆ ಸ್ಥಾಪನೆ ಮಾಡಲಾಗುತ್ತಿದೆ. 400 ಕ್ವಿಂಟಾಲ್ ಮೆಣಸಿನಕಾಯಿ ವಹಿವಾಟು ನಿರೀಕ್ಷೆ ಮಾಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

2023 -24ನೇ ಸಾಲಿನ 12ನೇ ಒಣಮೆಣಸಿನಕಾಯಿ ಮೇಳದಲ್ಲಿ 100 ರೈತರು ಭಾಗವಹಿಸಿದ್ದರು. 305 ಕ್ವಿಂಟಾಲ್ ಫಸಲು ಮಾರಾಟವಾಗಿ, 1.37 ಕೋಟಿ ರೂ. ವಹಿವಾಟು ನಡೆದಿತ್ತು. 2024- 25ನೇ ಸಾಲಿನಲ್ಲಿ ರಾಜ್ಯದಲ್ಲಿ 2.19 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗಿದೆ. ಅಂದಾಜು 3.37 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಗಿರೀಶ ತಿಳಿಸಿದರು.

ಮಂಡಳಿಯ ಪ್ರಧಾನ ವ್ಯವಸ್ಥಾಪಕ ಎಚ್.ಆರ್. ನಾಯ್ಕ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net