31 ಟನ್​ ಅಕ್ರಮ ಪಡಿತರ ಅಕ್ಕಿ ವಶ

1234
Published on

ಬೆಳಗಾವಿ: ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಸಾಗಣೆ ಮಾಡುವ ಉದ್ದೇಶದಿಂದ ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟದ್ದ 7 ಲಕ್ಷ ರೂ. ಮೌಲ್ಯದ 31 ಟನ್​ ಅಕ್ರಮ ಪಡಿತರ ಅಕ್ಕಿಯನ್ನು ಗ್ರಾಮೀಣ ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿ, ಬೆಳಗಾವಿ ತಾಲೂಕಿನ ಪೀರಣವಾಡಿಯ ಸಂಜಯ ಭೋಸಲೆ, ಹುಂಚ್ಯಾನಟ್ಟಿ ಗ್ರಾಮದ ವಾಸಿಂ ಮುಜಾವರ ಎಂಬುವರನ್ನು ಬಂಧಿಸಿದಾರೆ.

ಬಂಧಿತರು ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ನ್ಯಾಯಬೆಲೆ ಅಂಗಡಿಕಾರರು ಮತ್ತು ಪಡಿತರದಾರರಿಂದ ಅಕ್ಕಿ ಸಂಗ್ರಹಿಸಿ ತಾಲೂಕಿನ ಹುಂಚ್ಯಾನಟ್ಟಿ, ಪೀರಣವಾಡಿ ಗ್ರಾಮದ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಬಳಿಕ ಅಕ್ಕಿಯನ್ನು ಲಾರಿಗಳ ಮೂಲಕ ಗೋವಾ, ಮಹಾರಾಷ್ಟ್ರ ಸೇರಿ ವಿವಿಧ ಪ್ರದೇಶಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದರು.

ರಾಜ್ಯದ ಪಡಿತರ ಅಕ್ಕಿಯನ್ನು ಕಡಿಮೆ ದರದಲ್ಲಿ ಸಂಗ್ರಹಿಸಿಕೊಂಡು ನಗರ ಪ್ರದೇಶಗಳಲ್ಲಿರುವ ಹೊಟೀಲ್​, ಕಾರ್ಮಿಕರು, ಖಾಸಗಿ ಅಂಗಡಿಕಾರರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ದಾಳಿ ವೇಳೆ ತಿಳಿದು ಬಂದಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net