ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

4 RPT 1
Published on

ರಿಪ್ಪನ್​ಪೇಟೆ: ರಾಷ್ಟ್ರಕ್ಕಾಗಿ 31 ವರ್ಷಗಳ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ನಂತರ ಭಾನುವಾರ ಹುಟ್ಟೂರಿಗೆ ಮರಳಿದ ವೀರಯೋಧ ರತನ್​ಸಿಂಗ್​ಗೆ ಗ್ರಾಮಸ್ಥರು ಹೃದಯ ತುಂಬಿದ ಅಭಿಮಾನದಿಂದ ಸ್ವಾಗತ ಕೋರಿ ಬರಮಾಡಿಕೊಂಡರು.

ಯೋಧ ತನ್ನ ಹುಟ್ಟೂರಾದ ವಡಗೆರೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಯುವಕರು ಪಟಾಕಿ, ಸಿಡಿಮದ್ದು ಸಿಡಿಸಿ ಸಂಭ್ರಮದಿಂದ ‘ಭಾರತ್ ಮಾತಾಕೀ ಜೈ’ ಘೊಷಣೆ ಮೊಳಗಿಸಿದರೆ, ವನಿತೆಯರು ಆರತಿ ಬೆಳಗಿ ಯೋಧನಿಗೆ ವಿಜಯ ಸಿಂಧೂರ ಇಟ್ಟು ಕಾಲು ತೊಳೆದು ಬರಮಾಡಿಕೊಂಡರು. ಕೆಲವರು ಯೋಧನ ಪಾದರ್ಸ³ಸಿ ನಮಸ್ಕರಿಸುತ್ತಿದ್ದಂತೆ ಧನ್ಯತಾಭಾವ ಹೊಂದಿದ ವೀರಯೋಧನ ಕಣ್ಣಾಲಿಗಳು ತುಂಬಿಬಂದವು. ಇಂತಹ ಅವಿಸ್ಮರಣೀಯ ಸಂದರ್ಭದಲ್ಲಿ ಹುಟ್ಟೂರಿನ ಜನ ತೋರುತ್ತಿರುವ ಗೌರವ ಕಂಡು ಭಾವುಕರಾದ ಯೋಧ ರತನ್​ಸಿಂಗ್ ಆತ್ಮೀಯ ಆಲಿಂಗನದೊಂದಿಗೆ ಆನಂದಬಾಷ್ಪ ಸುರಿಸಿದರು.

ರಜಪೂತ ಜನಾಂಗದವರೇ ವಾಸವಿರುವ ಕುಗ್ರಾಮವಾದ ವಡಗೆರೆಯ ಮುದ್ದುಸಿಂಗ್ ಮತ್ತು ಧರ್ವಬಾಯಿ ಪುತ್ರ ರತನ್​ಸಿಂಗ್ ಹೆಸರಿಗೆ ತಕ್ಕಂತೆ ಕುಟುಂಬಕ್ಕೆ ಹಾಗೂ ಗ್ರಾಮಕ್ಕೆ ಒಂದು ಅಮೂಲ್ಯ ರತ್ನವೇ ಆಗಿದ್ದಾರೆ. 1968ನೇ ಸಾಲಿನಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಡಗೆರೆ, ರಿಪ್ಪನ್​ಪೇಟೆಯಲ್ಲಿ ಪೂರೈಸಿದ್ದಾರೆ. 1997ರಲ್ಲಿ ಕಮಲಾಬಾಯಿಯನ್ನು ವಿವಾಹವಾಗಿದ್ದು ಇಬ್ಬರು ಪುತ್ರರಿದ್ದಾರೆ.

ದೇಶ ಸೇವೆಗಾಗಿ ಸೇನೆ ಸೇರುವ ಉತ್ಕಟ ಬಯಕೆ ಹೊಂದಿದ್ದ ರತನ್​ಸಿಂಗ್ ಮಧ್ಯಪ್ರದೇಶದ ನಿಮುಚ್ಚ್​ನಲ್ಲಿ ತರಬೇತಿ ಪಡೆದು 1990ರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ನಂತರ ವಿಎಸ್​ಜಿ ಕಮಾಂಡೋ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತ ರಾಷ್ಟ್ರ ರಕ್ಷಣೆಯ ಜತೆಗೆ ದೇಶದ ಗಣ್ಯರ ರಕ್ಷಣೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಂಜಾಬ್, ಚಂಡಿಗಢ, ತ್ರಿಪುರಾ, ಕಾಶ್ಮೀರ, ಅಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ ಸಹಿತ ನವದೆಹಲಿಯ ಸಂಸತ್ ಭವನದಲ್ಲಿಯೂ ವಿಶೇಷ ಕರ್ತವ್ಯ ನಿರ್ವಹಿಸಿ 2020 ಡಿಸೆಂಬರ್ 31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.

ಊರಿಗೆ ಆಗಮಿಸುತ್ತಿರುವ ಮಾಹಿತಿ ಅರಿತ ಗ್ರಾಮಸ್ಥರು ಮುಂಚಿತವಾಗಿಯೇ ಸಜ್ಜುಗೊಂಡು ಜಯಘೊಷಗಳೊಂದಿಗೆ ಆತ್ಮೀಯವಾಗಿ ಗ್ರಾಮಕ್ಕೆ ಸ್ವಾಗತಿಸಿ, ಯೋಧನ ಕರ್ತವ್ಯ ನಿರ್ವಹಣೆಯ ಗುಣಗಾನದೊಂದಿಗೆ ಅವರ ಸ್ವಗೃಹದಲ್ಲಿ ಸನ್ಮಾನಿಸಿದರು. ಗ್ರಾಪಂ ಸದಸ್ಯರಾದ ಟಿ.ಸುಂದರೇಶ್, ಪಾರ್ವತಮ್ಮ, ಮಧುಶ್ರೀ, ಶಶಿಕಲಾ, ನಿವೃತ್ತ ಯೋಧರಾದ ಮಂಜುಸಿಂಗ್, ಕೊಲ್ಲೂರ್​ಸಿಂಗ್, ಗ್ರಾಮಸ್ಥರಾದ ರಾಮ್ಂಗ್, ಧರ್ಮಸಿಂಗ್, ಶ್ರೀನಿವಾಸ್ ಸಿಂಗ್, ಹಲಸಿನಕಟ್ಟೆ ಸುರೇಶ್ ಸಿಂಗ್, ದಿನೇಶ್​ಸಿಂಗ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net