

ಕೊಳ್ಳೇಗಾಲ: ಡಿ.30ರಿಂದ ಮೂರು ದಿನಗಳು 2022ನೇ ಸಾಲಿನ ಮಾನಸೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ತಿಳಿಸಿದರು.
ದಿ.ಆರ್.ಸಿದ್ದೇಗೌಡ-ಲಿಂಗಮ್ಮ ಸ್ಮರಣಾರ್ಥ ಈ ಬಾರಿ ಮಾನಸ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಮಾನಸೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರದಾನ ಮಾಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.30ರಂದು ನಡೆಯಲಿರುವ ಮಾನಸೋತ್ಸವ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಮೈಸೂರು ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 3 ಗಂಟೆಗೆ ನಿಸರ್ಗ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ಅಧ್ಯಕ್ಷೆಯನ್ನು ಮಾಜಿ ಶಾಸಕಿ ಪರಿಮಳಾ ನಾಗಪ್ಪ ವಹಿಸಲಿದ್ದಾರೆ ಎಂದರು.
ಡಿ.31 ಕ್ಕೆ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು, ಸಾನ್ನಿಧ್ಯವನ್ನು ಸಾಲೂರು ಬ್ರಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ವಹಿಸಲಿದ್ದು, ಶಾಸಕ ನಿರಂಜನಕುಮಾರ್ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಮಿಮಿಕ್ರಿ ಗೋಪಿಯಿಂದ ನಗೆಹಬ್ಬ, 2.30ಕ್ಕೆ ಖ್ಯಾತ ಚಲನಚಿತ್ರ ಗೀತರಚನಾಕಾರ ಡಾ.ವಿ.ನಾಗೇಂದ್ರಪ್ರಸಾದ್ ಅಧ್ಯಕ್ಷೆಯಲ್ಲಿ ಕವಿ ಗೋಷ್ಠಿ, ಸಂಜೆ 4ಕ್ಕೆ ಜಾನಪದ ವೈವಿಧ್ಯ, 6 ಗಂಟೆಗೆ ಸಾಂಸ್ಕೃತಿಕ ಕಲವರ ನಡೆಯಲಿದೆ.
ಜ.1ರಂದು ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಬೆಳಗು, 10.30ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾನ್ನಿಧ್ಯವನ್ನು ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮೈಮ್ ಷೋ, 3 ಗಂಟೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಎನ್.ಮಹೇಶ್ ಅದ್ಯಕ್ಷತೆ ವಹಿಸಲಿದ್ದಾರೆ. ಸಂಸದ ವಿ.ಶ್ರೀನಿವಾಸಪ್ರಸಾದ್ ಸಮಾರೋಪ ಭಾಷಣ ಮಾಡಲಿದ್ದಾರೆ. ಬಳಿಕ ವಿವಿಧ ಕ್ಷೇತ್ರಗಳ 11 ಜನರಿಗೆ ಸನ್ಮಾನ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದ 320 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಡಾ.ದತ್ತೇಶ್‌ಕುಮಾರ್ ತಿಳಿಸಿದರು.
ಮಾನಸ ಶಿಕ್ಷಣ ಸಂಸ್ಥೆಯ ವಿಶೇಷ ಅಧಿಕಾರಿ ನಾಗೇಂದ್ರಕುಮಾರ್, ಸಂಯೋಜನಾಧಿಕಾರಿ ಪಿ.ಎಸ್ ರಾಮಕೃಷ್ಣ, ನಿಸರ್ಗ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಚೆನ್ನಶೆಟ್ಟಿ, ನಿಸರ್ಗ ಕಾಲೇಜು ಆಫ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಧನಂಜಯ್, ಮುಖ್ಯ ಶಿಕ್ಷಕ ಶಂಕರ್, ಮೇಲ್ವಿಚಾರಕ ಕೆ.ಬಾಬು ಸುದ್ದಿಗೋಷ್ಠಿಯಲ್ಲಿದ್ದರು.