

ಹಾಸನ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆ ಚಾಲನೆಗೆ ಆ.30ರಂದು ರಾಜ್ಯಮಟ್ಟದ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಿಂದ ಫಲಾನುಭವಿಗಳನ್ನು ಕರೆದುಕೊಂಡು ಹೋಗಿ ಬರಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗೃಹ ಲಕ್ಷ್ಮೀಯೋಜನೆಯ ಸೌಲಭ್ಯ ವಿತರಣೆ ಚಾಲನಾ ಕಾರ್ಯಕ್ರಮ ಕುರಿತಂತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಈ ಮೊದಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೆ ಈಗ ರಾಜ್ಯಮಟ್ಟದ ಕಾರ್ಯಕ್ರಮ ಕುರಿತು ಆ.24ರಂದು ಮೈಸೂರಿನಲ್ಲಿ ನಡೆದ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಹಾಸನ ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯ ಕಾರ್ಯಕ್ರಮ ನಡೆಯುತ್ತಿಲ್ಲ. ಆದ ಕಾರಣ 203 ಬಸ್‌ಗಳಲ್ಲಿ ಜಿಲ್ಲೆಯ ಫಲಾನುಭವಿಗಳನ್ನು ರಾಜ್ಯಮಟ್ಟದ ಕಾರ್ಯಕ್ರಮ ನಡೆಯುದ ಮೈಸೂರಿಗೆ ಕರೆದು ಕೊಂಡು ಹೋಗಿಬರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಿಂದ ಫಲಾನುಭವಿಗಳನ್ನು ಕರೆದುಕೊಂಡು ಹೋಗುವ ಬಸ್‌ಗಳಲ್ಲಿ ಕುಡಿಯುವ ನೀರು, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಬೇಕು. ಫಲಾನುಭವಿಗಳು ಯಾವ ಸ್ಥಳಕ್ಕೆ ಮತ್ತು ಯಾವ ಸಮಯಕ್ಕೆ ಬರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ ಫಲಾನುಭವಿಗಳು ನೋಂದಣಿ ಮಾಡಿಸುವ ಸಂದರ್ಭದಲ್ಲಿ ನೀಡಿರುವ ಮೊಬೈಲ್ ನಂಬರ್ ಕಡ್ಡಾಯವಾಗಿ ತರುವಂತೆ ತಿಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಬಸ್‌ನಲ್ಲಿ ತೆರಳುವ ಫಲಾನುಭವಿಗಳು ಒಂದೇ ಗುಂಪಿನಲ್ಲಿರುವಂತೆ ತಿಳಿಸಿ. ಪ್ರತಿಯೊಬ್ಬ ಫಲಾನುಭವಿಯನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಕಾರ್ಯಕ್ರಮ ಮುಗಿದ ನಂತರ ಮೈಸೂರಿನಿಂದ ಹೊರಡುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಿ ಬಸ್‌ನಲ್ಲಿ ಪ್ರತಿಯೊಬ್ಬ ಫಲಾನುಭವಿ ಇದ್ದರಾ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದರು.
ಆ.30ರಂದು ಪ್ರತಿಯೊಬ್ಬ ಗೃಹ ಲಕ್ಷ್ಮೀ ಫಲಾನುಭವಿಗಳು ತಮ್ಮ ಮನೆಯ ಮುಂಭಾಗದಲ್ಲಿ ‘ಗೃಹ ಲಕ್ಷ್ಮೀ’ ಅಥವಾ ‘ನಾ ನಾಯಕಿ’ ಎಂದು ರಂಗೋಲಿ ಹಾಕುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಸ್‌ನೊಂದಿಗೆ ಹೋಗಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ನಿಗದಿತ ಸಮಯಕ್ಕೆ ಬಸ್ ತಲುಪಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು.
ಆಶಾ, ಅಂಗನವಾಡಿ ಹಾಗೂ ವಾಟರ್ ಮನ್‌ಗಳು ಮನೆ ಮನೆಗೆ ಹೋಗಿ ಫಲಾನುಭವಿಗಳು ಬಸ್‌ನಲ್ಲಿ ಕಾರ್ಯಕ್ರಮಕ್ಕೆ ತೆರಳಲು ಯಾವ ಸ್ಥಳಕ್ಕೆ ಬರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದರಲ್ಲದೆ, ಕಾರ್ಯಕ್ರಮ ಮುಗಿದ ನಂತರ ಫಲಾನುಭವಿಗಳನ್ನು ನಿಗಾ ವಹಿಸಿ ಕರೆತರಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಬಿ.ಎ.ಜಗದೀಶ್ ಅವರು ಮಾತನಾಡಿ, ಬಸ್‌ನಲ್ಲಿ ತೆರಳುವ ಮುನ್ನ ಫಲಾನುಭವಿಗಳ ಹೆಸರು ಮತ್ತು ಮೊಬೈಲ್ ನಂಬರ್‌ಗಳನ್ನು ಒಂದು ರಿಜಿಸ್ಟರ್‌ನಲ್ಲಿ ನಮೂದಿಸಿಕೊಳ್ಳಿ ಎಂದು ಸಲಹೆ ನೀಡಿದರಲ್ಲದೆ, ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಕಿಟ್‌ಅನ್ನು ಪ್ರತಿಯೊಂದು ಬಸ್‌ನಲ್ಲಿ ಇರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಾರುತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.