

ಹಾಸನ: ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ 37ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಗಣಪತಿ ಪೆಂಡಾಲ್‌ನಲ್ಲಿ ಸೆ.30ರಂದು ಪದ್ಮವಿಭೂಷಣ ಪುರಸ್ಕೃತ ಸಂಗೀತ ಕಲಾನಿಧಿ ಡಾ.ಉಮೈಯಾಳಪುರಂ ಕೆ. ಶಿವರಾಮನ್ ಅವರ ಮೃದಂಗ ವಾದನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇವರೊಂದಿಗೆ ಹಿಮ್ಮೇಳದಲ್ಲಿ ಅವಳಿ ಸಹೋದರರು ಎಂದೇ ಹೆಸರುವಾಸಿಯಾಗಿರುವ ಹೇಮಂತ್ ಮತ್ತು ಹೇರಂಭ್‌ರಿಂದ ಅಮೋಘ ದ್ವಂದ ್ವಕೊಳಲು ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಲಾ ಶಾಲೆ ಪ್ರಾಂಶುಪಾಲರಾದ ಅಂಬಳೆ ರಾಜೇಶ್ವರಿ ತಿಳಿಸಿದರು.
ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶಿವರಾಮನ್ ಅವರು ಸೆ.30ರಂದು ನಗರಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. 30ರ ಸಂಜೆ 6.30ಕ್ಕೆ ಸಾರ್ವಜನಿಕ ಪೆಂಡಾಲ್ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿರುವ ಕೊಳಲು ವಾದನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು, ಕಲಾವಿದರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾ ಶಾಲೆಯ ನಿರ್ದೇಶಕ ಅಂಬಳೆ ಸತ್ಯಪ್ರಸಾದ್, ಕಲಾವಿದರಾದ ವಿದ್ವಾನ್ ಹೇರಂಬ್ ಹಾಗೂ ವಿದ್ವಾನ್ ಹೇಮಂತ್ ಹಾಜರಿದ್ದರು.