30ಕ್ಕೆ ಹುಣಸವಳ್ಳಿಯಲ್ಲಿ ಸೊರಬ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ; ನಿಸರಾಣಿಯ ಮಾನ್ಯಾ ಸಮ್ಮೇಳನಾಧ್ಯಕ್ಷೆ

SOR WEB
Published on

ಸೊರಬ: ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸಹಯೋಗದಲ್ಲಿ ತಾಲೂಕಿನ ಹುಣಸವಳ್ಳಿಯ ವಸತಿ ಶಾಲೆಯ ಆವರಣದಲ್ಲಿ ಡಿ.30ರಂದು ತಾಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಹೇಳಿದರು.

ನಿಸರಾಣಿ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆ ವಿದ್ಯಾರ್ಥಿನಿ ಮಾನ್ಯಾ ಸಮ್ಮೇಳನಾಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಹಾಗೂ ಗೋಷ್ಠಿಗಳು ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 8ಕ್ಕೆ ತಹಸೀಲ್ದಾರ್ ಡಾ. ಮೋಹನ್ ಭಸ್ಮೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು ಹಾಗೂ ತಾಪಂ ಇಒ ನಾಗರಾಜ ಟಿ.ಅನ್ವೇಕರ್ ಕನ್ನಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 9.30ಕ್ಕೆ ಎವರಾನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಸಾನಿಕಾ ಬಿ.ಗೌಡ ಸಮ್ಮೇಳನ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಆಶಯ ನುಡಿ ನುಡಿಯಲಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಸಿ.ವೈ.ಐಶ್ವರ್ಯಾ ಅಧ್ಯಕ್ಷತೆ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಬಿಇಒ ರಾಮಲಿಂಗಯ್ಯ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಸಂತೋಷ ಕುಮಾರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದರು.

ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಸೊರಬ ಸರ್ಕಾರಿ ಪಿಯು ಕಾಲೇಜ್ ವಿದ್ಯಾರ್ಥಿ ಮಂಜುನಾಥ ಗಾವಡಿ, ಕವಿಗೋಷ್ಠಿಯಲ್ಲಿ ಆನವಟ್ಟಿ ಕೆಪಿಎಸ್ ಶಾಲೆಯ ವಿನೂತ ಹಾಗೂ ಕಥಾಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಸಾನಿಕಾ ವಹಿಸಲಿದ್ದಾರೆ ಎಂದರು ಮಾಹಿತಿ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಪಾಣಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ತಾಲೂಕಿನಿಂದ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಕಾರ್ಯಮಾಡಲಾಗುತ್ತಿದೆ. ವಿಚಾರಗೋಷ್ಠಿ, ಕವಿಗೋಷ್ಠಿ ಮತ್ತು ಕಥಾ ಗೋಷ್ಠಿಗಳಲ್ಲಿ ತಾಲೂಕಿನ ವಿವಿಧ ಶಾಲೆಯ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net