30ಕ್ಕೂ ಹೆಚ್ಚು ಜನರಿಗೆ ಕಚ್ಚಿದ ನಾಯಿ

dog bite
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ನಗರದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ ಬಳಿ ನಾಯಿಯೊಂದು ದಾಳಿ ನಡೆಸಿದ ಪರಿಣಾಮ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸೋಮವಾರ ಸಂಜೆ ವೇಳೆ ವಾಯುವಿಹಾರಕ್ಕೆ ತೆರಳಿದ್ದ ಹಾಗೂ ಬಸ್​ನಿಂದ ಉಳಿದು ಮನೆಗೆ ಹೊರಟಿದ್ದ ಜನರ ಮೇಲೆ ನಾಯಿ ದಾಳಿ ನಡೆಸಿದೆ. ಸಾಕಷ್ಟು ಜನ ಭಯಭೀತರಾಗಿ ಓಡಿ ಹೋಗಿ ನಾಯಿ ದಾಳಿಯಿಂದ ತಪ್ಪಿಸಿಕೊಂಡರು. ಕಚ್ಚಿಸಿಕೊಂಡವರು ಕಿಮ್ಸ್​ಗೆ ದೌಡಾಯಿಸಿದರು. ಚಿಕ್ಕ ಮಕ್ಕಳು, ಮಹಿಳೆಯರು ಸೇರಿ 16 ಜನ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಉಳಿದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದರು.

ನಾಯಿಗೆ ಹುಚ್ಚು ಹಿಡಿದಿರಬಹುದು ಎಂದು ಜನರು ಶಂಕೆ ವ್ಯಕ್ತಪಡಿಸಿದ್ದಾರೆ. ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಆಗಾಗ ಜನರ ಮೇಲೆ ದಾಳಿ ನಡೆಸಿರುವುದು ವರದಿಯಾಗುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಪಾಲಿಕೆ ವಿಫಲವಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ಘಟನೆ ಬಳಿಕ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಾಸವಿನಗರದ ಬಳಿ ನಾಯಿಯನ್ನು ಸೆರೆ ಹಿಡಿದಿದ್ದಾರೆ. ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಪಾಲಿಕೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net