ಏ.೧೪ ರಂದು ೩೦ನೇ ವರ್ಷದ ಎಡ್ಮ್ಯಾರ್ ಆಚರಣೆ

N.U.NACHAPPA
Published on

ಮಡಿಕೇರಿ: ಕೊಡವರ ಹೊಸ ವರ್ಷಾಚರಣೆ ಎಡ್ಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಏ.೧೪ ರಂದು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಸಂತಋತು ಫೆ.೧೫ ರಿಂದ ಆರಂಭಗೊಂಡು ಏ.೧೪ ಕ್ಕೆ ಕೊನೆಗೊಳ್ಳುವ ಎಡ್ಮ್ಯಾರ್‌ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು ೩೦ನೇ ವರ್ಷದ ಕಾರ್ಯಕ್ರಮವಾಗಿದೆ. ಏ.೧೪ ರಂದು ಬೆಳಗ್ಗೆ ೬ಗಂಟೆಗೆ ಮಡಿಕೇರಿ ತಾಲೂಕಿನ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಕೂಪದಿರ ಒಕ್ಕದ ಮೋಹನ್ ಅವರ ಭೂಮಿಯಲ್ಲಿ ಉಳುಮೆ ಮಾಡುವ ಮೂಲಕ ಎಡ್ಮ್ಯಾರ್ ಆಚರಣೆಗೆ ಚಾಲನೆ ನೀಡಲಾಗುವುದು. ಸಂಜೆ ೬.೩೦ಗಂಟೆಗೆ ಗೋಣಿಕೊಪ್ಪಲಿನ ಶ್ರೀಉಮಾಮಹೇಶ್ವರಿ ದೇವಾಲಯದ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಆರ್‌ಎಂಸಿ ಯಾರ್ಡ್‌ನಲ್ಲಿ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.


ಈ ಸಂದರ್ಭ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net