

ಮಂಡ್ಯ: ನಗರದ ಗಾಂಧಿಭವನದಲ್ಲಿ ಆ.30ರಂದು ಜಿಲ್ಲಾ ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ಉದ್ಘಾಟನೆ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ರಾಜ್ಯಾಧ್ಯಕ್ಷೆ ಡಾ.ಇಂದುಕಲಾ ಅರಸ್ ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಡಿ.ದೇವರಾಜ ಅರಸು ಭಾವಚಿತ್ರಕ್ಕೆ ತುಮಕೂರಿನ ಸಿದ್ದಾರ್ಥ ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ನಾಗಲಕ್ಷ್ಮೀ ಚೌಧರಿ ಪುಷ್ಪಾಭಿಷೇಕ ಮಾಡುವರು. ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನ ಮೈಸೂರು ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್ ಅಧ್ಯಕ್ಷತೆ ವಹಿಸುವರು, ಅರಸು ಅವರ ಸಾಧನೆಗಳ ಬಗ್ಗೆ ಟ್ರಸ್ಟ್‌ನ ರಾಜ್ಯಾಧ್ಯಕ್ಷೆ ಇಂದುಕಲಾ ಅರಸ್ ಮಾತನಾಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು ಗಣ್ಯರಿಗೆ ಪುಸ್ತಕ ತಾಂಬೂಲ ವಿತರಿಸುವರು. ಮೈಸೂರಿನ ಪೊಲೀಸ್ ಅಕಾಡೆಮಿಯ ಡಿಪ್ಯೂಟಿ ಡೈರಕ್ಟರ್ ಡಿ.ಸುಜಾತಾ, ಮೈಸೂರು ನಗರಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅರಸ್ ಭಾಗವಹಿಸುವರು. ಅರಸು ಜನಾಂಗಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 22 ಸಂಘಟನೆಗಳಿವೆ. ಈ ಪೈಕಿ ಮಹಿಳಾ ಸಂಘಟನೆ ಇರುವುದು ತಮ್ಮದೊಂದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್‌ನ ಘಟಕ ಸ್ಥಾಪಿಸಲಾಗುತ್ತಿದ್ದು, ಮಂಡ್ಯದಲ್ಲೇ ಮೊದಲ ಘಟಕ ಸ್ಥಾಪಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಟ್ರಸ್ಟ್‌ನ ಜಿಲ್ಲಾಧ್ಯಕ್ಷೆ ದೇವಿರಮ್ಮಣ್ಣಿ, ಗೌರವ ಕಾರ್ಯದರ್ಶಿ ವಿನೋದಾ ಅರಸ್, ಪ್ರಧಾನ ಸಂಚಾಲಕಿ ತೇಜಸ್ವಿನಿ, ಉಪ ಪ್ರಧಾನ ಸಂಚಾಲಕಿ ಮಮತಾ, ಖಜಾಂಚಿ ರಜಿನಿ, ನಿರ್ದೇಶಕಿ ತನುಜಾ ಹಾಜರಿದ್ದರು.