

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಹಲವು ಮಾರುಕಟ್ಟೆ ಸೇರಿ ವಿವಿಧೆಡೆ ಹೆಚ್ಚು ಉತ್ಪತ್ತಿಯಾಗಿರುವ ತ್ಯಾಜ್ಯವನ್ನು ತೆರವುಗೊಳಿಸುವಲ್ಲಿ ಪಾಲಿಕೆ ಕಾರ್ಯನಿರತವಾಗಿದ್ದರೂ, ಇನ್ನೂ ಕೆಲವೆಡೆ ಕಸ ಹಾಗೆಯೇ ರಾಶಿ ಬಿದ್ದಿದೆ. ಮೂರು ದಿನದಲ್ಲಿ 3 ಸಾವಿರ ಮೆಟ್ರಿಕ್ ಟನ್ ಕಸ ವಿಲೇ ಮಾಡಿದ್ದರೂ, ಕೆಲ ರಸ್ತೆಗಳ ಬದಿ ಬಿಸಾಡಿರುವ ಹೂ-ಹಣ್ಣು ಹಾಗೂ ಬಾಳೇ ಕಂಬಗಳ ತ್ಯಾಜ್ಯ ಕೊಳೆಯುತ್ತಿದೆ.
ಆಯುಧ ಪೂಜೆಗಾಗಿ ನಗರದ ಎಲ್ಲ ಮಾರುಕಟ್ಟೆ ಹಾಗೂ ರಸ್ತೆಬದಿಗಳಲ್ಲಿ ಬಾಳೆ ಕಂದು, ಬೂದು ಕುಂಬಳಕಾಯಿ, ಮಾವಿನ ಎಲೆಗಳು ಹಾಗೂ ಹೂ-ಹಣ್ಣುಗಳ ಮಾರಾಟ ಜೋರಿತ್ತು. ವಹಿವಾಟು ನಡೆಸಿದ ಬಳಿಕ ವ್ಯಾಪಾರಿಗಳು ಉಳಿದ ಬಾಳೆ ಕಂಬ ಸಹಿತ ಇತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಇದರ ವಿಲೇವಾರಿ ಪಾಲಿಕೆ ಹೆಗಲೇರಿದ್ದು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಂಸ್ಥೆಯು ಹೆಚ್ಚುವರಿ ವಾಹನಗಳನ್ನು ನಿಯೋಜಿಸಿ ಕಸ ವಿಲೇವಾರಿಗೆ ಗಮನ ಹರಿಸಿದೆ.
ನಗರದಲ್ಲಿ ನಿತ್ಯ ಅಂದಾಜು 4,900 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಅ.12ರಂದು 6,306 ಮೆ. ಟನ್, ಅ.13ರಂದು 5,561 ಮೆ. ಟನ್ ಹಾಗೂ ಅ.14ರಂದು 5,866 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಇವುಗಳಲ್ಲಿ ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳು ಹಾಗೂ ಮಿಶ್ರ ತ್ಯಾಜ್ಯವನ್ನು ಲ್ಯಾಂಡ್ ಫಿಲ್‌ನಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆಗಳಲ್ಲೇ ಹೆಚ್ಚು ತ್ಯಾಜ್ಯ ವಿಲೇ:
ನಗರದಲ್ಲಿ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರುಕಟ್ಟೆ, ಗಾಂಧಿಬಜಾರ್, ಮಲ್ಲೇಶ್ವರ ಮಾರುಕಟ್ಟೆ, ಕೆ.ಆರ್.ಪುರ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ರಸಲ್ ಮಾರುಕಟ್ಟೆ, ಪಾಲಿಕೆ ಬಜಾರ್ ಸೇರಿ 12 ಮಾರುಕಟ್ಟೆಗಳಲ್ಲಿ ಹಬ್ಬದ ಬಳಿಕ ಹೆಚ್ಚು ತ್ಯಾಜ್ಯವನ್ನು ವಿಲೇ ಮಾಡಲಾಗಿದೆ. ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕೆಲಸಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದು, 2 ದಿನದಲ್ಲಿ ಪೂರ್ಣವಾಗಿ ಕಸ ವಿಲೇವಾರಿ ಆಗಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಯಂತ್ರೋಪಕರಣಗಳ ಬಳಕೆ:
ನಗರದ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚುವರಿಯಾಗಿ ತ್ಯಾಜ್ಯ ಉತ್ಪಾದನೆಯಾಗಿದ್ದ ಕಾರಣ ಆಯಾ ವಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳನ್ನು ನಿಯೋಜಿಸಲಾಗಿತ್ತು. ಇವರ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಜೆಸಿಬಿ ಬಳಸಿಕೊಂಡು ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳಲ್ಲಿ 3-4 ಟ್ರಿಪ್‌ಗಳು ತುಂಬಿಕೊಂಡು ವಿಲೇವಾರಿ ಮಾಡುವ ಕೆಲಸ ಮಾಡಲಾಗಿದೆ. ಕಸ ಸುರಿಯುವ ಕ್ವಾರಿಗಳ ಬಳಿ ಕಸದ ಲಾರಿಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂದಿದೆ.
ತ್ಯಾಜ್ಯ ವಿಲೇವಾರಿ ವಿವರ:
ದಿನ ಉತ್ಪತ್ತಿಯಾದ ತ್ಯಾಜ್ಯ
ಅ.12 6,306 ಮೆಟ್ರಿಕ್ ಟನ್
ಅ.13 5,561 ಮೆಟ್ರಿಕ್ ಟನ್
ಅ.14 5,866 ಮೆಟ್ರಿಕ್ ಟನ್
ಹಬ್ಬದ ವೇಳೆ ರಸ್ತೆಬದಿ ಬಾಳೆಕಂಬ, ಹೂ-ಹಣ್ಣು ಮಾರಾಟಗಾರರು ವಹಿವಾಟು ಬಳಿಕ ಮಾರಾಟವಾಗದ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತೆರಳುತ್ತಾರೆ. ಹಬ್ಬದ ದಿನ 10 ರೂ. ಕಡಿಮೆ ದರಕ್ಕೆ ನೀಡಲು ಸಿದ್ದರಿಲ್ಲದ ವ್ಯಾಪಾರಿ, ಮಧ್ಯವರ್ತಿಗಳಿಂದ ನೆಲಬಾಡಿಗೆ ಪಡೆದಲ್ಲಿ ಬೇಕಾಬಿಟ್ಟಿಯಾಗಿ ಮಾರಾಟಕ್ಕೆ ತಡೆ ಹಾಕಬಹುದು. ಇದರತ್ತ ಬಿಬಿಎಂಪಿ ಗಮನಹರಿಸಲಿ.
- ಮುನೇಗೌಡ, ಯಲಹಂಕ