ಬಿಬಿಎಂಪಿಯಿಂದ ಡೆಂಘೆ ಸಮೀಕ್ಷೆಗೆ 3,000 ತಂಡ ಬಳಕೆ

Vijayavani-Featured-Image
Published on

ಬೆಂಗಳೂರು: ರಾಜಧಾನಿಯಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಕೈಗೊಂಡಿರುವ ಮನೆ ಮನೆ ಸಮೀಕ್ಷೆಗೆ 3,000 ತಂಡಗಳನ್ನು ಬಳಸಿಕೊಳ್ಳುತ್ತಿದ್ದು, ಕಿರಿಯ ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು, ಲಿಂಕ್ ವರ್ಕರ್ಸ್‌ ಹಾಗೂ ಸ್ವಯಂ ಸೇವಕರು ಈ ತಿಂಗಳು ಪೂರ್ಣ ಮಾಹಿತಿ ಕಲೆ ಹಾಕಲಿದ್ದಾರೆ.

ನಗರದಲ್ಲಿರುವ ಎಲ್ಲ 25 ಲಕ್ಷ ಮನೆಗಳಿಗೂ ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಜತೆಗೆ ಡೆಂಘೆ ನಿಯಂತ್ರಣ ಕುರಿತ ಬಿತ್ತಿಪತ್ರಗಳನ್ನೂ ವಿತರಿಸಿ ಜಾಗೃತಿ ಮೂಡಿಸಲಾಗುತ್ತದೆ. ಪಾಲಿಕೆ ಸಿಬ್ಬಂದಿ ಈಗಾಗಲೇ ಮನೆ-ಮನೆಗೆ ಭೇಟಿ ನೀಡಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ತಿಳಿಸಿದ್ದಾರೆ.

ನಗರದಲ್ಲಿ ಕಳೆದ ಜನವರಿಯಿಂದ ಈವರೆಗೆ 3,815 ಡೆಂಘೆ ಪ್ರಕರಣಗಳು ವರದಿಯಾಗಿವೆ. ಜು.1ರಿಂದ 6ನೇ ತಾರೀಖಿನವರೆಗೆ 776 ಪ್ರಕರಣಗಳು ದೃಡಪಟ್ಟಿವೆ. ಪ್ರತಿನಿತ್ಯ ಸರಾಸರಿ 130-140 ಪ್ರಕರಣಗಳು ದೃಢಪಡುತ್ತಿದ್ದು, ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ ಹಾಗೂ ಫಾಗಿಂಗ್ ಕೈಗೊಳ್ಳಲಾಗುತ್ತಿದೆ ಎಂದರು.

ನಾಗರಿಕರ ಸಹಕಾರಕ್ಕೆ ಮನವಿ:

ರಾಜಧಾನಿಯಲ್ಲಿರುವ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ತಪ್ಪದೇ ಅನುಸರಿಸಿದಲ್ಲಿ ಮಾತ್ರ ಡೆಂಘೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಡೆಂಘೆ ನಿಂತ್ರಣಕ್ಕೆ ನಾಗರಿಕರ ಸಹಕಾರವೇ ಪ್ರಮುಖ ಪಾತ್ರ ವಹಿಸಲಿದ್ದು, ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಡೆಂಘೆ ಉಲ್ಬಣಿಸದಂತೆ ಪಾಲಿಕೆ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಪರಿಣಾಮ ಮಳೆನೀರು ನಿಂತಲ್ಲೇ ನಿಂತು ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಒಮ್ಮೆಲೆ ಜೋರಾಗಿ ಮಳೆ ಬಂದರೆ ಸೊಳ್ಳೆಗಳ ಉತ್ಪತ್ತಿ ತಾಣಗಳು ನಾಶವಾಗಲಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಉದ್ದೇಶದಿಂದ ಔಷಧಿ ಸಿಂಪಡಣೆ ಮಾಡುವ ಹಾಗೂ ಫಾಗಿಂಗ್ ಮಾಡುವ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸಲು ಆಯಾ ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net