

ಬೀದರ್: ಎಲ್ಲರ ಬಾಯಲ್ಲಿ ನೀರು ತರಿಸುವ ಹಣ್ಣಿನ ರಾಜ ಮಾವಿಗೆ ಆಲಿಕಲ್ಲು ಸಹಿತ ಅಕಾಲಿಕ (ಔಖಳಿ) ಮಳೆ ಹಾಗೂ ಆಗಾಗ್ಗೆ ಬೀಸುತ್ತಿರುವ ಗಾಳಿ ಕುತ್ತು ತಂದಿದೆ. ಅತಿವೃಷ್ಟಿಯಿಂದ ಎರಡು ವರ್ಷ ಹಾನಿಯಿಂದ ಹೊರಬರದ ಬೆಳೆಗಾರರಿಗೆ ಮತ್ತೆ ಈಗ ಸಂಕಷ್ಟ ಎದುರಾಗಿದೆ.
ಪ್ರಸಕ್ತ ವರ್ಷ ಮಳೆ ಉತ್ತಮವಾಗಿದೆ. ಆದರೆ ಇತ್ತೀಚಿನ ಅಲಿಕಲ್ಲುಸಹಿತ ಅಕಾಲಿಕ ಮಳೆ, ಗಾಳಿಯಿಂದಾಗಿ ಜಿಲ್ಲೆಯಲ್ಲಿ ಮಾವಿನ ಇಳುವರಿಗೆ ಭಾರಿ ಪೆಟ್ಟು ಬಿದ್ದಿದೆ. ಜಿಲ್ಲೆಯ ವಿವಿಧೆಡೆ ಆಗಾಗ್ಗೆ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರರು ತತ್ತರಿಸಿದ್ದು, ಔಖಳಿ ಮಳೆ, ಗಾಳಿಯಿಂದ ಶೇ.20 ಹಾನಿಯಾಗಿದೆ.
ಆಲಿಕಲ್ಲು ಮಳೆಗೆ ಜಿಲ್ಲಾದ್ಯಂತ 300 ಹೆಕ್ಟೇರ್ ಮಾವು ನಷ್ಟಕ್ಕೀಡಾಗಿದೆ. ತೋಟಗಾರಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಪರಿಹಾರಕ್ಕಾಗಿ ಮಾವು ಬೆಳೆಗಾರರು ಕಾಯುತ್ತಿದ್ದಾರೆ.
ಕಳೆದ ನಾಲ್ಕು ವರ್ಷ ಜಿಲ್ಲೆಯಲ್ಲಿ ಮಳೆ ಅಭಾವವಿದ್ದು, ಅಂತರ್ಜಲ ಮಟ್ಟ ಬಹಳಷ್ಟು ಕುಸಿದಿತ್ತು. 300 ಅಡಿಗೆ ಸಿಗಬೇಕಿದ್ದ ನೀರು 600 ಅಡಿ ಅಗೆದರೂ ಸಿಗುತ್ತಿಲ್ಲ. ಮಳೆ ಕೊರತೆ, ಅಂತರ್ಜಲ ಕುಸಿತದ ಪರಿಣಾಮ ಮಾವಿನ ಇಳುವರಿ ಮೇಲೆ ಬೀರಿದೆ. ಪ್ರಸ್ತುತ ಮಳೆ ಉತ್ತಮವಾಗಿ ಬಂದು ಬಂಪರ್ ಇಳುವರಿ ನಿರೀಕ್ಷೆ ಇತ್ತು. ಆದರೆ ಇತ್ತೀಚೆಗೆ ಸುರಿದ ಔಖಳಿ ಮಳೆ, ಗಾಳಿ ಹಾಗೂ ವಿವಿಧ ರೋಗದ ಕಾರಣಗಳಿಂದ ಒಂದಿಷ್ಟು ಹೊಡೆತ ಬಿದ್ದಿದೆ.
ಬೇಸಿಗೆ ಆರಂಭದೊಂದಿಗೆ ರುಚಿ ರುಚಿ ಮಾವುಗಳ ಸೀಜನ್ ಬರುತ್ತದೆ. ಮೇ ತಿಂಗಳಂತೂ ಮಾರುಕಟ್ಟೆ ಎಲ್ಲೆಡೆ ಬಗೆ ಬಗೆಯ ಮಾವುಗಳೇ ಕಾಣುತ್ತಿದ್ದವು. ಆದರೆ ಪ್ರಸಕ್ತ ವರ್ಷ ಫಸಲು ವಿಳಂಬವಾಗಿ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಔಖಳಿ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಔಖಳಿ ಮಳೆ ಸ್ಥಗಿತಗೊಂಡರೆ ಸದ್ಯಕ್ಕೆ ಇರುವಷ್ಟು ಫಸಲಾದರೂ ಪಡೆಯಬಹುದಾಗಿದೆ.
ಬಸವಕಲ್ಯಾಣದಲ್ಲಿ ಅಧಿಕ ಹಾನಿ: ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಸಹಿತ ಔಖಳಿ ಮಳೆಯಿಂದಾಗಿ ಜಿಲ್ಲಾದ್ಯಂತ 300 ಹೆಕ್ಟೇರ್ ನಲ್ಲಿ ಸಮೃದ್ಧವಾಗಿದ್ದ ಮಾವು ಹಾನಿಗೀಡಾಗಿದೆ. ಅತಿವೃಷ್ಟಿಯಿಂದ ಕಟಾವಿಗೆ ಬಂದಿದ್ದ ಹಣ್ಣುಗಳ ರಾಜನಿಗೆ ಭಾರಿ ಹೊಡೆತ ಬಿದ್ದಿದ್ದು, ರೈತರು ಕಂಗಾಲು ಆಗುವಂತಾಗಿದೆ. ಬಸವಕಲ್ಯಾಣ ತಾಲೂಕಿನಲ್ಲಿ ಅಕ 107.90 ಹೆಕ್ಟೇರ್ ಹಾನಿಯಾಗಿದೆ. ಬೀದರ್ 101.40, ಚಿಟಗುಪ್ಪ 38.92, ಹುಮನಾಬಾದ್ 25.95, ಭಾಲ್ಕಿ 16.90, ಕಮಲನಗರ 5.92, ಔರಾದ್ ತಾಲೂಕಿನಲ್ಲಿ 2.92 ಹೆಕ್ಟೇರ್ ಹಾನಿಯಾಗಿದೆ. ಜಿಲ್ಲಾದ್ಯಂತ 2151 ಹೆಕ್ಟೇರ್ ನಲ್ಲಿ ಮಾವು ಬೆಳೆ ಇದೆ.