

ಚಾಮರಾಜನಗರ: ಸುಮಾರು 30 ಮಕ್ಕಳಿಗೆ ಓರ್ವ ಶಿಕ್ಷಕರು ಇರಬೇಕಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300 ಮಕ್ಕಳಿಗೆ ಕೇವಲ 4 ಶಿಕ್ಷಕರು ಇದ್ದು, ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಕ ಮಾಡುವಂತೆ ಶಾಲಾ ಮಕ್ಕಳೊಂದಿಗೆ ಪಾಲಕರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪಿಡಬ್ಲ್ಯೂಡಿ ಕಾಲೋನಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿ ಪಾಲಕರು ಮತ್ತು ಮಕ್ಕಳು ಕೆಲಕಾಲ ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಿಡಬ್ಲ್ಯೂಡಿ ಕಾಲೋನಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿಯಿಂದ 7 ನೇ ತರಗತಿಯ ವರೆಗೆ 320 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯನ್ನು ಡಾ.ಬಸವರಾಜೇಂದ್ರ ಅವರು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದ್ದು, ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಶಿಕ್ಷ ದೊರೆಯುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದಾರೆ ಎಂದು ಪಾಲಕರು ಹೇಳಿದರು.
ಕಳೆದ ಸಾಲಿನಲ್ಲಿ ಇಬ್ಬರು ಖಾಯಂ ಶಿಕ್ಷಕರು ಇದ್ದು, ಇಬ್ಬರು ಅತಿಥಿ ಶಿಕ್ಷಕರನ್ನು ಇಲಾಖೆಯಿಂದ ನೇಮಕ ಮಾಡಿಕೊಳ್ಳಲಾಗಿತ್ತು. ಬಸವರಾಜೇಂದ್ರ ಟ್ರಸ್ಟ್ ವತಿಯಿಂದ 5 ಶಿಕ್ಷಕರನ್ನು ನೀಡಿದ್ದರು. ಆದರೆ ಪ್ರಸ್ತುತ ಶಿಕ್ಷಣ ಇಲಾಖೆಯವರು ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತೇವೆ ಎಂದು ಹೇಳಿ, ಕೇವಲ ಇಬ್ಬರು ಖಾಯಂ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಾಲಕರಾದ ಪರಶಿವಮೂರ್ತಿ, ಮಹದೇವಸ್ವಾಮಿ, ಮನು, ಕಲೀಂವುಲ್ಲಾ, ಮಹೇಶ್, ಸ್ವಾಮಿ, ತ್ಯಾಗರಾಜ್, ರವಿ, ಸಿದ್ದರಾಜು ಹಾಗೂ ಇತರರು ಭಾಗವಹಿಸಿದ್ದರು.
ಶಿಕ್ಷಣಾಧಿಕಾರಿಯಿಂದ ಭರವಸೆ:
ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಅವರು ಆಗಮಿಸಿ ಮಕ್ಕಳ ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಅವರು ಮಾತನಾಡಿ, ಕೂಡಲೇ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ. ಡಾ.ಬಸವರಾಜೇಂದ್ರ ಅವರೊಂದಿಗೂ ಮಾತನಾಡಿದ್ದು, ಅವರು ಕೂಡ 5 ಶಿಕ್ಷಕರನ್ನು ಎಂದಿನಂತೆ ಹಾಕುತ್ತೇವೆ ಎಂದಿದ್ದಾರೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು. ಬಳಿಕ ಪಾಲಕರು ಪ್ರತಿಭಟನೆ ಕೈಬಿಟ್ಟರು. ಈ ವೇಳೆ ಬಿಆರ್‌ಸಿ ರಾಜೀವ್, ಬಿಆರ್‌ಪಿ ಮಹದೇವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ಮಹದೇವಸ್ವಾಮಿ ಹಾಜರಿದ್ದರು.
ಈ ಶಾಲೆಯಲ್ಲಿ ಹಲವು ಪೌರಕಾರ್ಮಿಕರ ಮಕ್ಕಳು ಓದುತ್ತಿದ್ದಾರೆ. ಶಾಲೆ ಪ್ರಾರಂಭವಾದ ದಿನಗಳಿಂದ ಈವರೆಗೂ ಕೇವಲ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. 320 ಮಕ್ಕಳಿಗೆ ಅವರಿಬ್ಬರು ಹೇಗೆ ಪಾಠ ಮಾಡಲು ಸಾಧ್ಯವಾಗುತ್ತದೆ.
-ಸಿ.ಕೆ.ಮಹದೇವ್, ಪಾಲಕ, ಚಾಮರಾಜನಗರ