

ಶಿವಮೊಗ್ಗ: ಜಿಲ್ಲಾದ್ಯಂತ ಶನಿವಾರ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದ್ದು, ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಜಿಲ್ಲಾದ್ಯಂತ 39 ಕೇಂದ್ರಗಳಲ್ಲಿ 17,196 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಕನ್ನಡ ಪರೀಕ್ಷೆಗೆ 300 ವಿದ್ಯಾರ್ಥಿಗಳು ಗೈರಾದರು. ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಹಾಗೂ ಜಾಗ್ರತ ದಳದ ಸದಸ್ಯರನ್ನು ನೇಮಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಅಕ್ರಮ ತಡೆಗೆ ಜಿಪಂ ಕಚೇರಿಯಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ನಿಯೋಜಿತ ಪರೀಕ್ಷಾ ಸಿಬ್ಬಂದಿ ಜಿಪಂ ಕಚೇರಿ ವೆಬ್ ಕ್ಯಾಸ್ಟಿಂಗ್ ಕೇಂದ್ರದಿಂದಲೇ ಪರೀಕ್ಷೆ ಅಕ್ರಮಗಳ ಮೇಲೆ ಕಣ್ಗಾವಲು ಇರಿಸಿದರು.
ಶನಿವಾರ ಬೆಳಗ್ಗೆ ಮಾತೃಭಾಷೆ ಕನ್ನಡ ಇದ್ದ ಕಾರಣ ವಿದ್ಯಾರ್ಥಿಗಳು ಖುಷಿಯಿಂದ ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕಿದರು. ಬಹಳಷ್ಟು ಪಾಲಕರು ಮಕ್ಕಳನ್ನು ಪರೀಕ್ಷಾ ಕೇಂದ್ರದವರೆಗೆ ವಾಹನಗಳಲ್ಲಿ ಕರೆತಂದು ಧೈರ್ಯ ತುಂಬಿ ಪರೀಕ್ಷೆಗೆ ಕಳುಹಿಸಿದರು.