

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸಮುದಾಯಕ್ಕೆ ಹರಡಿರುವ ಆತಂಕದ ಬೆನ್ನಲ್ಲೇ ಪಾವಗಡ ತಾಲೂಕಿನಲ್ಲಿ ಮಂಗಳವಾರ ಒಂದೇ ದಿನ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ ಕರೊನಾ ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ. ಹೊಸದಾಗಿ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ, ಪ್ರಕರಣಗಳ ಸಂಖ್ಯೆ 292ಕ್ಕೇರಿದ್ದು, ಕರೊನಾ ತ್ರಿಶಕದತ್ತ ದಾಪುಗಾಲು ಹಾಕುತ್ತಿದೆ. ಪಾವಗಡ ತಾಲೂಕಿನಲ್ಲಿ 14 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಗುಬ್ಬಿ-3, ಕೊರಟಗೆರೆ-2 ಹಾಗೂ ತುಮಕೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ ಹಾಗೂ ತುರುವೇಕೆರೆ ತಾಲೂಕಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 5 ಮಕ್ಕಳು, ಗರ್ಭಿಣಿಗೂ ಸೊಂಕು: ಪಾವಗಡ ತಾಲೂಕಿನಲ್ಲಿ ಕರೊನಾ ಆರ್ಭಟಿಸಿದೆ. 1 ವರ್ಷದೊಳಗಿನ ಮಗು ಸೇರಿ ಐದು ಮಕ್ಕಳಿಗೆ ಹಾಗೂ 2 ತಿಂಗಳ ಗರ್ಭಿಣಿಗೂ ಸೋಂಕು ತಗುಲಿರುವುದು ಗಾಬರಿ ಹುಟ್ಟಿಸಿದೆ.
ಹೊಸಹಳ್ಳಿಯ ವರ್ಷದೊಳಗಿನ ಗಂಡುಮಗುವಿಗೆ ನೆಗಡಿ, ಕೆಮ್ಮು ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದು ಸೋಂಕು ಕಂಡುಬಂದಿದೆ. ಇನ್ನು, ಪಟ್ಟಣದ 7 ವರ್ಷದ ಹೆಣ್ಣುಮಗು, ಕೆಂಚಗಾನಹಳ್ಳಿಯ 11 ವರ್ಷದ ಹೆಣ್ಣುಮಗು, ದೇವಲಾಹಿಹಳ್ಳಿ ತಾಂಡಾದ 8 ವರ್ಷದ ಹೆಣ್ಣುಮಗು ಹಾಗೂ ಕ್ಯಾತನೆಗೆರೆಯ 7 ವರ್ಷದ ಗಂಡು ಮಗುವಿಗೆ ಸೋಂಕು ದೃಢಪಟ್ಟಿದೆ. ಹೊಸಹಳ್ಳಿಯ 21 ವರ್ಷದ 2 ತಿಂಗಳ ಗರ್ಭಿಣಿಗೆ ಸೋಂಕು ದೃಢವಾಗಿದೆ. ವರ್ಷದ ಮಗುವಿಗೆ ಹಾಗೂ ಗರ್ಭಿಣಿಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈಎನ್ ಹೊಸಕೋಟೆಯ 40 ವರ್ಷದ ಗಂಡ, 32 ವರ್ಷದ ಹೆಂಡತಿಗೂ ಸೋಂಕು ತಗುಲಿದೆ. 42 ವರ್ಷದ ಮತ್ತೊಬ್ಬ ವ್ಯಕ್ತಿಗೂ ದೃಢವಾಗಿದೆ. ಪಾವಗಡ ಪಟ್ಟಣದ 17, 18 ವರ್ಷದ ಯುವಕರು, ರೊಪ್ಪದ 65ವರ್ಷದ ವೃದ್ಧ, ಚಿತ್ತಗಾನಹಳ್ಳಿಯ 38 ವರ್ಷದ ವ್ಯಕ್ತಿ, ಮುಗದಾಳಬೆಟ್ಟದ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಬಹುತೇಕರಿಗೆ ರೋಗಲಕ್ಷಣಗಳಿಲ್ಲದ ಕಾರಣ ತಾಲೂಕು ಕರೊನಾ ಸೆಂಟರ್‌ನಲ್ಲೇ ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗುತ್ತಿದೆ. 3 ಪ್ರಕರಣ: ಗುಬ್ಬಿ ಕೋಟೆಬೀದಿಯ 60 ವರ್ಷದ ವೃದ್ಧ, ತಾಲೂಕಿನ ಬಿಳಿನಂದಿಯ 32 ವರ್ಷದ ಮಹಿಳೆ, ಮಾವಿನಹಳ್ಳಿ ಗೊಲ್ಲರಹಟ್ಟಿಯ 21ವರ್ಷದ ಯುವಕನಿಗೆ, ಕೊರಟಗೆರೆ ತಾಲೂಕಿನ 60 ವರ್ಷದ ವೃದ್ಧೆ ಹಾಗೂ ಸೋಮಾಪುರದ ಅಮ್ಮನಹಳ್ಳಿಯ 21 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಕುಣಿಗಲ್ ತಾಲೂಕಿನ ಸಿದ್ದರಾಮಯ್ಯನಪಾಳ್ಯದ 60 ವರ್ಷದ ವೃದ್ಧೆಗೆ ಕೆಮ್ಮು, ನೆಗಡಿ ಕಾಣಿಸಿಕೊಂಡ ಬಳಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದೇ ರೀತಿ ತುರುವೇಕೆರೆಯ ಮೇಲನಹೊರಗೆರೆಹಳ್ಳಿಯ 29 ವರ್ಷದ ಮಹಿಳೆಗೆ ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು ಕಾಣಿಸಿಕೊಂಡಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುಲು ತೆರಳಿದ್ದ ವೇಳೆ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಸೋಂಕು ದೃಢವಾಗಿದೆ.ನಾಗವಲ್ಲಿಯ 55 ವರ್ಷದ ಮಹಿಳೆ ವಾಂತಿ, ಭೇದಿಯಿಂದ ನಿತ್ರಾಣಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು. ನಂತರ ಗಂಟಲುದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ಸೋಂಕು ದೃಢಪಟ್ಟಿದ್ದು, ಕರೊನಾ ಮಾರ್ಗಸೂಚಿ ಅನ್ವಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮಹಿಳೆ ಮರಳೂರುದಿಣ್ಣೆ ಪ್ರಯಾಣ ಹಿನ್ನೆಲೆ ಹೊಂದಿದ್ದರು.
ಜಿಲ್ಲಾಸ್ಪತ್ರೆ ಸೇರಿ ತಾಲೂಕು ಕೇಂದ್ರಗಳಲ್ಲಿನ ಕರೊನಾ ಸೆಂಟರ್‌ನಲ್ಲಿ 1022 ಹಾಸಿಗೆಗಳನ್ನು ಪ್ರಕರಣಗಳ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಮುಂಬರುವ ದಿನಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಲಾಗುವುದು. ಸೋಂಕಿತರು ಯಾವುದೇ ಆತಂಕಕ್ಕೊಳ ಗಾಗುವ ಅವಶ್ಯಕತೆ ಇಲ್ಲ. ಸೆಂಟರ್‌ಗಳಲ್ಲಿ ಊಟ, ವಸತಿ ವ್ಯವಸ್ಥೆ ಉಚಿತವಾಗಿರಲಿದೆ. 60 ವರ್ಷ ಮೇಲ್ಪಟ್ಟವರು ಆದಷ್ಟು ಮನೆಯಲ್ಲೇ ಇರಬೇಕು.
ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ
ಸೋಂಕಿತನ ಚಿಕ್ಕಪ್ಪನಿಗೆ ಕರೊನಾ: ಚಿಕ್ಕನಾಯಕನಹಳ್ಳಿ ತಾಲೂಕಿನ ಕಾಡೇನಹಳ್ಳಿಯ ಸೋಂಕಿತ ಇಂಜಿನಿಯರಿಂಗ್ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಚಿಕ್ಕಪ್ಪನಿಗೂ ಸೋಂಕು ತಗುಲಿದೆ. ಜು.2 ರಂದು 70 ವರ್ಷದ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗಳವಾರ ಸೋಂಕು ದೃಢವಾಗಿದೆ. ಈತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ.