ಸ್ವಾತಂತ್ರ ದಿನಾಚರಣೆ ನಿಮಿತ್ತ 300 ಮೀಟರ್ ಉದ್ದದ ತಿರಂಗಾ ಯಾತ್ರೆ, ಎಬಿವಿಪಿಯಿಂದ ವಿನೂತನ ಕಾರ್ಯಕ್ರಮ

tiranga yatre abvp
ವಿಜಯಪುರ ನಗರದಲ್ಲಿ ಎಬಿವಿಪಿಯಿಂದ ಬೃಹತ್ ತಿರಂಗಾ ಯಾತ್ರೆ ನಡೆಯಿತು.
Published on

ವಿಜಯಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಗುರುವಾರ 300 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆ ನಡೆಯಿತು.

ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಗರದ ಮಹಾತ್ಮ ಬಸವೇಶ್ವರ ವೃತ್ತದ ಮಾರ್ಗವಾಗಿ ಶಿವಾಜಿ ವೃತ್ತದವರೆಗೆ ನಡೆದ ಯಾತ್ರೆಯುದ್ದಕ್ಕೂ ವಿದ್ಯಾರ್ಥಿಗಳು ‘ಭಾರತ್ ಮಾತಾ ಕೀ ಜೈ’ ‘ವಂದೇ ಮಾತರಂ’ ‘ದೇಶ ಮೊದಲು’ ಎನ್ನುವ ಘೋಷಣೆ ಮೊಳಗಿಸಿದರು.

ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಶಕ್ತಿಯ ಕೊಡುಗೆ ಅಪಾರ. ಅವರಿಗೆ ದೇಶದ ಕುರಿತು ಇದ್ದ ಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಬೇಕು. ಭಾರತ ದೇಶಕ್ಕೆ ಸ್ವಾತಂತ್ರ ದೊರಕಿದ್ದು ಸಾವಿರಾರು ಜನರ ಬಲಿದಾನದಿಂದ. ಆ ಬಲಿದಾನವನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಯಾವ ದೇಶ ಬಲಿದಾನ ಸ್ಮರಿಸಿಕೊಳ್ಳುವುದಿಲ್ಲವೋ ಆ ದೇಶ ಹಾಳಾಗುತ್ತದೆ ಎಂದರು.

ಭಾರತ ದೇಶ ಆರ್ಥಿಕವಾಗಿ ಪ್ರಬಲವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸಶಕ್ತವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ವಿಶ್ವದಲ್ಲಿ ಒಂದು ಬಲಿಷ್ಠ ದೇಶವಾಗಿ ಮುನ್ನಡೆ ಸಾಧಿಸುತ್ತಿದೆ. ಇಂತಹ ಸಮಯದಲ್ಲಿ ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಳ ಮಾಡುವುದು ದೇಶದ ಪ್ರತಿಯೊಬ್ಬ ನಾಗಕರಿನ ಜವಾಬ್ದಾರಿಯಾಗಿದೆ ಎಂದರು.

ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಎಬಿವಿಪಿ ಪ್ರತಿ ವರ್ಷ ತಿರಂಗಾ ಯಾತ್ರೆಯಂಥ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಕಾಲೇಜಿನ ವಿದ್ಯಾರ್ಥಿ ಕೇವಲ ಒಬ್ಬ ಸಾಮಾನ್ಯ ವಿದ್ಯಾರ್ಥಿಯಲ್ಲ ಅವನು ನಮ್ಮ ದೇಶದ ಮಹಾನ್ ಪ್ರಜೆ ಎಂದರು.

ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ, ಅಮಿತಕುಮಾರ ಬಿರಾದಾರ, ಸಂಜು ಕುಲಕರ್ಣಿ, ಸಂದೀಪ ಅರಳಗುಂಡಿ, ಶಶಿಕಾಂತ ರಾಕ್ಲೆ, ಮಂಜುನಾಥ ಹಳ್ಳಿ, ಐಶ್ವರ್ಯ ಕುಲಕರ್ಣಿ, ಸ್ನೇಹಾ ಹಿರೇಮಠ, ಪ್ರವೀಣ ಬಿರಾದಾರ, ಸುರೇಖಾ ಕುಲಕರ್ಣಿ, ಚೇತನ ಕೋರವಾರ, ದಾನಮ್ಮ ಹೊಸಮನಿ, ತ್ರಿಶಿಲಾ ರಾಠೋಡ, ಸುನೀಲ ರಾಠೋಡ, ಮೋಹನ ಗುಣದಾಳ, ಸುರೇಶ ಲೋನಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net