300 ಅರ್ಜಿಗೆ ಸಾಲ ಮಂಜೂರಾತಿ: ಬಿವೈಆರ್

mp meeting
ಲೀಡ್ ಬ್ಯಾಂಕ್‌ನ ಡಿಎಲ್‌ಆರ್‌ಸಿ ಹಾಗೂ ಡಿಸಿಸಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಎನ್.ಹೇಮಂತ್, ಶರತ್ ಪಿ.ಗೌಡ, ವೆಂಕಟರಮಣ, ಬಿ.ಚಂದ್ರಶೇಖರ ಉಪಸ್ಥಿತರಿದ್ದರು.
Published on

ಶಿವಮೊಗ್ಗ: ನಗರದಲ್ಲಿ ಆಶ್ರಯ ಮನೆ ಫಲಾನುಭವಿಗಳು ಸಾಲಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಿದ್ದು, ಅ.7ರಂದು ಫಲಾನುಭವಿಗಳಿಗೆ ಸಾಲದ ಮಂಜೂರಾತಿ ಪತ್ರ ನೀಡಲಾಗುತ್ತಿದೆ. ಈ ಮೂಲಕ ನಾಗರಿಕರಿಗೆ ದಸರಾ ಸಂದರ್ಭ ಭರ್ಜರಿ ಕೊಡುಗೆ ನೀಡಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸೋಮವಾರ ಜಿಪಂ ಸಭಾಂಗಣದಲ್ಲಿ ಲೀಡ್ ಬ್ಯಾಂಕ್‌ನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಶ್ರಯ ಫಲಾನುಭವಿಗಳು ಸಾಲಕ್ಕಾಗಿ ಸಲ್ಲಿಸಿದ್ದ 390 ಅರ್ಜಿಗಳು ಬಾಕಿ ಉಳಿದಿವೆ. ಕಡೇ ಪಕ್ಷ ಇವುಗಳಲ್ಲಿ 300 ಅರ್ಜಿಗಳನ್ನು ಅಂತಿಮಗೊಳಿಸಿ ಅ.7ರ ಮಧ್ಯಾಹ್ನ ನಗರ ಪಾಲಿಕೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಲ ಮಂಜೂರಾತಿ ಪತ್ರ ವಿತರಿಸಲಾಗುವುದು ಎಂದರು.
ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಆರ್ಥಿಕ ಯೋಜನೆಗಳಡಿ ಸಾಲ ಇಲ್ಲವೇ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ ಹಲವು ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳ 3ನೇ ವಾರದಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಶಿವಮೊಗ್ಗ ಆಶ್ರಯ ಮನೆ ಫಲಾನುಭವಿಗಳು ಸಾಲಕ್ಕಾಗಿ ಸಲ್ಲಿಸಿರುವ ಅರ್ಜಿಗಳು ಕೆನರಾ ಬ್ಯಾಂಕ್, ಎಸ್‌ಬಿಐನಲ್ಲಿ ಹೆಚ್ಚಿವೆ. ಈ ಎರಡೂ ಬ್ಯಾಂಕ್‌ಗಳು ಕ್ರಮವಾಗಿ 100 ಹಾಗೂ 75 ಅರ್ಜಿಗಳಿಗೆ ಸಾಲ ಮಂಜೂರು ಮಾಡಬೇಕು. ಉಳಿದೆಲ್ಲ ಬ್ಯಾಂಕ್‌ಗಳು ಮುಂದಿನ ವಾರದೊಳಗೆ ಕಡೇ ಪಕ್ಷ 25 ಮಂದಿಗೆ ಸಾಲ ನೀಡಬೇಕೆಂದು ಹೇಳಿದರು.
ಜಿಪಂ ಸಿಇಒ ಎನ್.ಹೇಮಂತ್ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಚಂದ್ರೇಶೇಖರ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಡಿಜಿಎಂ ಆರ್.ದೇವರಾಜ್, ಬೆಂಗಳೂರು ಆರ್‌ಬಿಐ ಅಧಿಕಾರಿ ವೆಂಕಟರಮಣ, ನಬಾರ್ಡ್ ಡಿಡಿಎಂ ಪಿ.ಶರತ್ ಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net