

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ವಿಶ್ವವಿಖ್ಯಾತ ದಸರಾ ಮಹೋತ್ಸವ ಸಂದರ್ಭದಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದ್ದು, ಇದರ ನಿರ್ವಹಣೆಗೆ ಹೆಣಗಾಡುತ್ತಿರುವ ಕೆಎಸ್‌ಆರ್‌ಟಿಸಿ 300 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಮುಂದಾಗಿದ್ದು, ಇದರಿಂದ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಬರುವ ಜನರಿಗೆ ಅನುಕೂಲವಾಗಲಿದೆ.
ಕಳೆದ ವರ್ಷ ಅದ್ದೂರಿಯಾಗಿ ನಡೆದ ದಸರಾಕ್ಕಾಗಿ 240 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಸಲ 300 ಬಸ್ ಪಡೆದುಕೊಳ್ಳಲಾಗುತ್ತಿದೆ. ಇದರೊಂದಿಗೆ ಬೆಂಗಳೂರು ಇನ್ನಿತರ ವಿಭಾಗಗಳಿಂದಲೂ ಮೈಸೂರಿಗೆ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅಗತ್ಯ ಬಸ್ ಸೌಲಭ್ಯ ಕಲ್ಪಿಸಿದಂತಾಗಲಿದೆ.
ಅ.15ರಿಂದ 24ರ ವರೆಗೆ ನಡೆಯುವ ದಸರಾಕ್ಕಾಗಿ ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಹೆಚ್ಚುವರಿ ಬಸ್ ಸಂಚಾರದೊಂದಿಗೆ ಪ್ರಯಾಣಿಕರಿಗೆ ಅನುಕೂಲ ಒದಗಿಸಿ, ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಈ ಸಲ ದಸರಾದಲ್ಲಿ ಶೇ.30ರಷ್ಟು ಹೆಚ್ಚಿನ ಜನದಟ್ಟಣೆ ಆಗಲಿದೆ ಎಂದು ಈಗಾಗಲೇ ಜಿಲ್ಲಾಡಳಿತ ಆಂದಾಜಿಸಿದೆ. ಇದು ಕೆಎಸ್‌ಆರ್‌ಟಿಸಿ ಬಸ್ ಸೇವೆ ಮೇಲೆಯೂ ಪರಿಣಾಮ ಬೀರಲಿದೆ.
ಶಕ್ತಿ ಯೋಜನೆಯ ಫಲವಾಗಿ ಮೈಸೂರು ನಗರ, ಗ್ರಾಮಾಂತರ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಈ ಯೋಜನೆ ಜಾರಿಗೊಳ್ಳುವ ಮುನ್ನ ಮೈಸೂರು ವಿಭಾಗದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆಗಿಂತ ಪ್ರಸ್ತುತ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.15ರಿಂದ 30ರಷ್ಟು ಹೆಚ್ಚಳವಾಗಿದೆ. ಇದರಿಂದ ದಸರಾ ಮಹೋತ್ಸವದ ಆಚರಣೆ ಸಂದರ್ಭದಲ್ಲಿ 15ರಿಂದ 20 ದಿನದವರೆಗೆ ಮೈಸೂರಿನಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ.
ಇದರೊಂದಿಗೆ, ಹೊರ ರಾಜ್ಯಗಳಿಂದಲೂ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗಲಿದೆ. ಇದರ ಫಲವಾಗಿ ಬಸ್‌ಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಸಾಧ್ಯತೆಯಿದ್ದು, ಅದಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ.
ದಸರಾ ಸಂದರ್ಭದಲ್ಲಿ ಇಡೀ ಮೈಸೂರು ದೀಪಾಲಂಕಾರದಿಂದ ಝಗಮಗಿಸಲಿದೆ. ವಿವಿಧೆಡೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ. ದಸರಾ ಕಾರ್ಯಕ್ರಮದೊಂದಿಗೆ ಮೈಸೂರನ್ನು ನೋಡಲೆಂದು ಬರುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಜತೆಗೆ, ಚಾಮುಂಡಿಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಗೆ ನವರಾತ್ರಿ ಸಂದರ್ಭದಲ್ಲಿ ವಿವಿಧ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. 9 ದಿನವೂ ದೇವಿಯ ದರ್ಶನ ಪಡೆದರೆ ಒಳ್ಳೆಯದಾಗುತ್ತದೆಂಬ ನಂಬಿಕೆ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಭಕ್ತರ ಆಗಮನವಾಗಲಿದ್ದು, ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಬಸ್ ಸೇವೆ ಮೇಲೆ ಒತ್ತಡ ಅಧಿಕವಾಗಲಿದೆ.
ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಘಟಕ-1, ಘಟಕ-3, ಕೆ.ಆರ್.ನಗರ, ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕುವೆಂಪುನಗರ, ಸಾತಗಳ್ಳಿ, ವಿಜಯನಗರ ಸೇರಿದಂತೆ 9 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 26 ಬಸ್ ನಿಲ್ದಾಣಗಳಿಂದ ಸಾರಿಗೆ ಸೇವೆ ನೀಡಲಾಗುತ್ತಿದೆ. ಪ್ರಸ್ತುತ 976 ಅನುಸೂಚಿ ಮಾರ್ಗದಲ್ಲಿ ನಿತ್ಯ 8,084 ಟ್ರಿಪ್ಸ್‌ನಲ್ಲಿ ಬಸ್‌ಗಳು ಓಡಾಡುತ್ತಿವೆ. 1,071 ಬಸ್ ನಿತ್ಯ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿ ದಿನ ಸರಾಸರಿ 3.14 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿವೆ. ಜಿಲ್ಲಾ ವ್ಯಾಪ್ತಿಯ ಎಲ್ಲ 870 ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಮಾಣ ಗಣನೀಯ ಏರಿಕೆಯಾಗಿದೆ.
ಆದರೆ, ಅದಕ್ಕೆ ತಕ್ಕಂತೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಿಲ್ಲ. ಮೊದಲು ಎಷ್ಟು ಬಸ್‌ಗಳಿದ್ದವೋ ಈಗಲೂ ಅಷ್ಟೇ ಇವೆ. ಇದುವೇ ಬಸ್‌ಗಳ ಕೊರತೆಗೆ ಕಾರಣವಾಗಿದೆ. ಇದನ್ನು ಸರಿದೂಗಿಸಲು ಹೆಚ್ಚುವರಿ ಬಸ್ ತರಿಸಲಾಗುತ್ತಿದೆ.
ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಒಟ್ಟಾರೆ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಈ ಹಿಂದೆ ದೈನಂದಿನ ಪ್ರಯಾಣಿಕರ ಸಂಖ್ಯೆ 3.23 ಲಕ್ಷ ಇತ್ತು. ಅದೀಗ 4.09 ಲಕ್ಷ ದಾಟಿದೆ. ಶೇ.30ರಷ್ಟು ಹೊಸ ಪ್ರಯಾಣಿಕರು ಸೇರ್ಪಡೆಗೊಂಡಿದ್ದಾರೆ.
ಮಹಿಳೆಯರು ಕುಟುಂಬ ಸಹಿತ ಪ್ರಯಾಣ ಮಾಡುತ್ತಿದ್ದು, ಮಕ್ಕಳು, ಪತಿಯನ್ನೂ ಕರೆತರುತ್ತಿದ್ದಾರೆ. ಇದರಿಂದಾಗಿ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಈ ಹಿಂದೆ ಮೈಸೂರು ವಿಭಾಗದ ದೈನಂದಿನ ಆದಾಯ 1.26 ಕೋಟಿ ರೂ. ಇತ್ತು. ಅದೀಗ 1.56 ಕೋಟಿ ರೂ.ಗೆ ಜಿಗಿದಿದೆ. ನಿತ್ಯ ಹೆಚ್ಚುವರಿಯಾಗಿ 30 ಲಕ್ಷ ರೂ. ಆದಾಯದಲ್ಲಿ ಬರುತ್ತಿದೆ.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸುವ ಜನರು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಇದರೊಂದಿಗೆ, ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಅದಕ್ಕಾಗಿ ಈ ಸಲ ಹೆಚ್ಚುವರಿ ಬಸ್‌ಗಳನ್ನು ಸನ್ನದ್ಧಗೊಳಿಸಲಾಗುವುದು.
ಜಿ.ಶ್ರೀನಿವಾಸ್
ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ