30 ಸಾವಿರ ಸಸಿಗಳ ಉಚಿತ ವಿತರಣೆ ಇಂದು

22 CRP 02
Published on

ಚನ್ನರಾಯಪಟ್ಟಣ: ಪಟ್ಟಣದ ಶಾಲಿನಿ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಹಸಿರು ಹಬ್ಬ ಕಾರ್ಯಕ್ರಮದಡಿ ಸೆ.23ರಂದು 30 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಸಿದ್ಧತೆ ನಡೆಸಿಕೊಂಡಿದ್ದಾರೆ.


33 ವರ್ಷಗಳಿಂದ ಪ್ರತಿ ಬಾರಿಯೂ ವಿವಿಧ ಪ್ರಭೇದದ 20ರಿಂದ 25 ಸಾವಿರ ಸಸಿಗಳನ್ನು ಬೆಳೆದು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿರುವ ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಅವರು ಈ ಬಾರಿ 30 ಸಾವಿರ ಸಸಿಗಳನ್ನು ವಿತರಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸರ್ಕಾರ ಹಾಗೂ ಖಾಸಗಿ ಸಂಘ-ಸಂಸ್ಥೆಗಳಿಂದ ಯಾವುದೇ ನಿರೀಕ್ಷೆ ಇಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಮಗೆ ದೊರೆತಿರುವ ಇಂದಿರಾ ಪ್ರಿಯದರ್ಶಿನಿ ಹಾಗೂ ರಾಜೀವ್ ಗಾಂಧಿ ಪರಿಸರ ಪ್ರಶಸ್ತಿಗಳಿಂದ ಬಂದ ನಗದನ್ನು ಈ ಕಾರ್ಯಕ್ಕೆ ವಿನಿಯೋಗ ಮಾಡಿದ್ದಾರೆ.


ಪಟ್ಟಣದ ಆನೇಕೆರೆ ರಸ್ತೆಯಲ್ಲಿರುವ ತಮ್ಮದೇ ತೋಟದಲ್ಲಿ ನೆರಳು ಹಾಗೂ ಹಣ್ಣು ನೀಡುವ ವಿವಿಧ ಪ್ರಭೇದದ ಸುಮಾರು 30 ಸಾವಿರಕ್ಕೂ ಹೆಚ್ಚು ಸಸಿಗಳ ಬೀಜಗಳನ್ನು ಪ್ಯಾಕೆಟ್‌ನಲ್ಲಿ ಬಿತ್ತಿ ತುಂತುರು ನೀರಾವರಿ ಅಳವಡಿಸಿ ಬೆಳೆಸಿದ್ದಾರೆ.


ಲಭ್ಯವಿರುವ ಸಸಿಗಳು
ಶ್ರೀಗಂಧ, ಮಹಗನಿ, ತೇಗ, ಕಾಡು ಗೋಡಂಬಿ, ನೆಲನಲ್ಲಿ, ಇನ್‌ಸುಲಿನ್, ಹಲಸು, ಹೆಬ್ಬೇವು, ಬಾದಾಮಿ, ಕರಿಬೇವು, ಚಕ್ರಮುನಿ, ಆಡಸೋಗೆ, ದಾಸವಾಳ, ತುಳಸಿ, ಹುಣಸೆ, ಅಮೃತಬಳ್ಳಿ, ಹೊಂಗೆ, ನೇರಳೆ, ಗಸಗಸೆ, ಚೆರ‌್ರಿ, ದೊಡ್ಡಪತ್ರೆ, ಅತ್ತಿ ಹಾಗೂ ಸಪೋಟ ಸೇರಿದಂತೆ ಒಟ್ಟು 30 ಸಾವಿರ ಸಸಿಗಳನ್ನು ಬೆಳೆಸಲಾಗಿದೆ.


ಶುಕ್ರವಾರ ವಿತರಣೆ: ಶಾಲಿನಿ ವಿದ್ಯಾಸಂಸ್ಥೆ ಆವರಣದಲ್ಲಿ ಭೂಮಿ ಉಳಿಸಿ ಆಂದೋಲನಾ, ಸ್ನೇಹ ಬಳಗ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಬೆಳಕು ಹಳೆಯ ವಿದ್ಯಾರ್ಥಿಗಳ ಸೇವಾ ಸಂಘ ಹಾಗೂ ಶ್ರೀ ವಿವೇಕಾನಂದ ಯೋಗಾ ಕೇಂದ್ರದ ಸಹಯೋಗದೊಂದಿಗೆ ಸೆ.23ರಂದು ಬೆಳಗ್ಗೆ 9 ಗಂಟೆಗೆ ಸಸಿಗಳ ಉಚಿತ ವಿತರಣಾ ಕಾರ್ಯಕ್ರಮ ನಡೆಯಲಿದೆ. ತಾಲೂಕಿನ ರೈತರು ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಅವರ ಆಶಯವಾಗಿದೆ.


ಸ್ವಾಮೀಜಿ ಚಾಲನೆ: ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಉಚಿತ ಸಸಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾಲುಮರದ ತಿಮ್ಮಕ್ಕ, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಶಾಲಿನಿ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಎನ್.ನಂಜುಂಡೇಗೌಡ, ಪರಿಸರ ಪ್ರೇಮಿ ಬಳ್ಳೂರು ಉಮೇಶ್ ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಉತ್ತಮ ಪರಿಸರ ನಿರ್ಮಾಣವಾದಲ್ಲಿ ಮಾತ್ರ ಪ್ರಕೃತಿಯ ಮಡಿಲಿನಲ್ಲಿ ಸಕಲ ಜೀವಸಂಕುಲವು ಬದುಕುಳಿಯಲು ಸಾಧ್ಯ. ಕಾಡುಕೃಷಿ ಅನುಸರಿಸುವುದರಿಂದ ಪರಿಸರ ಅಭಿವೃದ್ಧಿ ಜತೆಗೆ ಆದಾಯವೂ ಸಿಗಲಿದೆ. ಈ ಬಾರಿ ವಿವಿಧ ಪ್ರಭೇದದ 30 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು.ಸಿ.ಎನ್.ಅಶೋಕ್ ಪರಿಸರ ಪ್ರೇಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net