30 ಸಾವಿರ ಮಹಿಳೆಯರಿಗೆ 600 ಕೋಟಿ ರೂ. ಸಾಲ ವಿತರಣೆ

14 vtp 1Darmasthala
Published on

ವಿರಾಜಪೇಟೆ: ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ 30 ಸಾವಿರ ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ 600 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ಮಹಿಳಾ ಜ್ಞಾನವಿಕಾಸ ಕೇಂದ್ರಗಳು ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಗರದಲ್ಲಿರುವ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಈಗಾಗಲೇ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು, ಮಹಿಳೆಯರು ಎಲ್ಲ ರಂಗದಲ್ಲಿಯೂ ಪ್ರಗತಿ ಸಾಧಿಸುತ್ತಿದ್ದಾರೆ. ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಗ್ರಾಮೀಣ ಭಾಗದ ಆಸಕ್ತ ಮಹಿಳೆಯರನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಯೋಜನೆಯ ಸೌಲಭ್ಯಗಳನ್ನು ಸದಸ್ಯರು ಸರಿಯಾಗಿ ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಆಶಿಸಿದರು.


ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಡಿ.ಆರ್.ರವಿಕುಮಾರ್ ಮಾತನಾಡಿ, ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಗ್ರಾಮಗಳಲ್ಲಿ ಸಮಸ್ಯೆಗಳಿದ್ದಾಗ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಬಹುದು. ಪಾಲಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಯುವಕರು ದುಶ್ಚಟಗಳಿಗೆ ದಾಸರಾಗದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಯೊಜನೆಯ ತಾಲೂಕು ಜ್ಞಾನವಿಕಾಸ ಕೇಂದ್ರದ ಬಿ.ಎಸ್.ಪವಿತ್ರಾ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕರಾದ ಅಂಬಿಕಾ ಉತ್ತಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಅಮ್ಮತ್ತಿ ವಲಯದ ಮೇಲ್ವಿಚಾರಕ ಸುಜೀರ್ ಕುಲಾಲ್, ತಾಲೂಕು ಲೆಕ್ಕಪರಿಶೋಧಕ ನವಿನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳಾದ ಅಮೃತಾ, ಆರ್.ಶ್ರೇಯಾ ಇತರರಿದ್ದರು.


ಸೌಲಭ್ಯ ವಿತರಣೆ: ಪೊನ್ನಂಪೇಟೆ ಶ್ರೀ ಮಂಗಲ ವಲಯದ ಸದಸ್ಯರಾದ ಸುಜಾತಾ ಮನೆಯಲ್ಲಿ ಅನಿಲ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡವರಿಗೆ 33 ಸಾವಿರ ರೂ., ಅನಾರೋಗ್ಯಕ್ಕೀಡಾಗಿದ್ದ ಗೋಣಿಕೊಪ್ಪ-ಚೆನ್ನಂಗೊಲ್ಲಿ ರುಕ್ಷ್ಮಿಣಿ, ಜಯ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವಿರಾಜಪೇಟೆ ವೆಂಕಪ್ಪ, ಆನೆ ದಾಳಿಗೆ ತುತ್ತಾದ ಸಿದ್ದಾಪುರ-ಪಾಲಿಬೆಟ್ಟ ಸಿ.ಎಸ್.ಸರಿತಾ ಕುಟುಂಬಸ್ಥರಿಗೆ ತಲಾ 20 ಸಾವಿರ ರೂ. ಹಾಗೂ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ 15 ಸಾವಿರ ರೂ. ಸೇರಿ ಒಟ್ಟು 1,28,000 ರೂ. ಚೆಕ್ ಅನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net