

ಹಾನಗಲ್ಲ: ಅಲ್ಯೂಮಿನಿಯಂ, ಹಿತ್ತಾಳೆ, ತಾಮ್ರದಿಂದ ದೇವರ ವಿಗ್ರಹ, ಸೌಟು, ಮತ್ತಿತರ ವಸ್ತುಗಳನ್ನು ತಯಾರಿಸುತ್ತ ಹಾನಗಲ್ಲಿಗೆ ಆಗಮಿಸಿದ್ದ ಬೀದರ, ಕಲಬುರಗಿ ಜಿಲ್ಲೆಯ ವಲಸಿಗ ತಂಡದ 30 ಜನರಿಗೆ ತಾಲೂಕು ಆಡಳಿತ, ಪುರಸಭೆ ಮತ್ತು ಬಿಸಿಎಂ ಇಲಾಖೆ ಸಹಯೋಗದಲ್ಲಿ ಸೋಮವಾರದಿಂದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಹಾನಗಲ್ಲ-ಪಾಳಾ ರಸ್ತೆಯ ಬಡಾವಣೆಯ ಖಾಲಿ ನಿವೇಶನಗಳಲ್ಲಿ ಟೆಂಟ್ ಹಾಕಿಕೊಂಡು ತಮ್ಮ ಉದ್ಯೋಗದಲ್ಲಿ ತೊಡಗಿದ್ದ ವಲಸಿಗರನ್ನು ಗುರುತಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ, ಬಿಸಿಎಂ ಇಲಾಖೆ ವಿಸ್ತೀರ್ಣಾಧಿಕಾರಿ ಎಸ್. ಆನಂದ್ ಅವರ ತಂಡ ತಹಸೀಲ್ದಾರ್ ಎರ್ರಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ನಂತರ ಪ್ರತಿದಿನ ಆಹಾರ ಪೂರೈಸುವ ವ್ಯವಸ್ಥೆ ಹಮ್ಮಿಕೊಂಡಿದ್ದಾರೆ. ಇವರೊಂದಿಗೆ ಇತ್ತೀಚೆಗೆ ಬಿಹಾರ ಮೂಲದ 11 ಜನರಿಗೂ ಆಹಾರ ಪೂರೈಕೆ ಹಾಗೂ ವಾಸ್ತವ್ಯದ ವ್ಯವಸ್ಥೆ ಕೈಗೊಳ್ಳಲಾಗಿದೆ.
ಪಟ್ಟಣದಲ್ಲೂ ರಸ್ತೆಗೆ ಬೇಲಿ: ಕರೊನಾ ಹರಡುವಿಕೆ ಹಿನ್ನೆಲೆಯಲ್ಲಿ ಹೊರರಾಜ್ಯ-ಜಿಲ್ಲೆಗಳಿಂದ ಬಾರದಂತೆ ಗ್ರಾಮಗಳಲ್ಲಿ ಗಡಿಯಲ್ಲಿ ಬೇಲಿ ಹಾಕಿ ನಿರ್ಬಂಧ ಹೇರಿದ್ದರು. ಅದೇ ರೀತಿ ಪಟ್ಟಣದ ಚಿದಂಬರ ನಗರದ ಬಡಾವಣೆಗೆ ಬೇಲಿ ಹಾಕಿದ್ದಾರೆ. ಪಟ್ಟಣದ ನವನಗರ ಬಡಾವಣೆಯಲ್ಲೂ ಎರಡೂ ಬದಿಯ ರಸ್ತೆಗೆ ಹಾಕಲಾಗಿದ್ದ ಬೇಲಿಯನ್ನು ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಮಾಸ್ಕ್-ಆಹಾರ ಪದಾರ್ಥಗಳ ವಿತರಣೆ: ಪಟ್ಟಣದ ಮೂಕಾಂಬಿಕಾ ಗ್ಯಾಸ್ ವಿತರಕ ಎಚ್.ಎಚ್. ರವಿಕುಮಾರ ಹಾಗೂ ಬಜಾಜ್ ಶೋ ರೂಂ ಮಾಲೀಕ ಎಂ.ಶಿವಲಿಂಗೇಶ್ವರ ಅವರು ಪಟ್ಟಣದ ಹೊರಭಾಗದಲ್ಲಿ ವಾಸವಾಗಿರುವ ಕಲಬುರಗಿ ಹಾಗೂ ಬಿಹಾರದ ವಲಸಿಗರಿಗೆ ಮಾಸ್ಕ್ ಹಾಗೂ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ವಿತರಿಸಿದರು.