ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ : ಸಿಎಂಗೆ ಎಂಎಲ್ಸಿ ಇಂಚರ ಗೋವಿಂದರಾಜು ಒತ್ತಾಯ

22
Published on

ಕೋಲಾರ: ಸಚಿವ ಮುನಿರತ್ನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು 8 ತಿಂಗಳಾದರೂ ಅಭಿವೃದ್ಧಿಗೆ ಗಮನಹರಿಸಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಜಿಪಂ ಕೆಡಿಪಿ ಸಭೆಗಳನ್ನೂ ನಡೆಸಿಲ್ಲ. ಇಂತಹ ನಿಷ್ಪ್ರಯೋಜಕ ಮಂತ್ರಿ ಯಾಕೆ ಬೇಕು ಎಂದು ಎಂಎಲ್ಸಿ ಇಂಚರ ಗೋವಿಂದರಾಜು ತೀವ್ರ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವರಾದ ನಂತರ ಸ್ವಾತಂತ್ರ$್ಯ ದಿನಾಚರಣೆ, ಗಣರಾಜ್ಯೋತ್ಸವ ಧ್ವಜಾರೋಹಣ ಮಾಡುವುದನ್ನು ಬಿಟ್ಟರೆ ತೋಟಗಾರಿಕೆ ಸಚಿವರಾಗಿದ್ದರೂ, ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಗೋಳನ್ನು ಸಹ ಕೇಳಲು ಬರಲಿಲ್ಲ. ಮೊದಲು 4 ತಿಂಗಳು ಪೂರ್ಣಾವಧಿ ಉಸ್ತುವಾರಿ ಮಂತ್ರಿಯಾಗಿಲ್ಲ. ಕರೊನಾ ಉಸ್ತುವಾರಿಗೆ ಸಚಿವನಾಗಿದ್ದೇನೆ ಎನ್ನುತ್ತಿದ್ದರು. ನಂತರ ಪೂರ್ಣಾವಧಿ ಸಚಿವರಾದರೂ ಪ್ರಯೋಜನವಾಗಿಲ್ಲ ಎಂದರು.

ಯರಗೋಳ್​ ಜಲಾಶಯ ತುಂಬಿದ್ದು, ಕುಡಿಯುವ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಿಲ್ಲ. ಯರಗೋಳ್​ಗೆ ಹೋಗಿ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿ 4 ತಿಂಗಳು ಕಳೆದರೂ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಜಲಾಶಯದಲ್ಲಿ 74 ಅಡಿ ನೀರಿದ್ದು, ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಮುಖ್ಯಮಂತ್ರಿಗಳಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಆದರೆ ಉಸ್ತುವಾರಿ ಸಚಿವರು ಜವಾಬ್ದಾರಿ ಮರೆತಿದ್ದಾರೆ ಎಂದರು.

ಎಚ್​.ನಾಗೇಶ್​ ಉಸ್ತುವಾರಿ ಸಚಿವರಾಗಿದ್ದಾಗ ಸಭೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಮುನಿರತ್ನ ಕೆಡಿಪಿ ಮತ್ತು ಇತರೆ ಸಭೆಗಳನ್ನು ನಡೆಸಿ ಸಮಸ್ಯೆ ಆಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದ ಭ್ರಷ್ಟ ಅಧಿಕಾರಿಗಳು ಲೂಟಿಗಿಳಿದಿದ್ದಾರೆ. ಎಲ್ಲಿಂದಲೋ ಬಂದ ಮುನಿರತ್ನಗೆ ಜಿಲ್ಲೆಯ ಬಗ್ಗೆ ಏನು ಗೊತ್ತಿದೆ? ನಮ್ಮನ್ನು ಸೇರಿಸಿ ಒಂದು ಸಭೆ ನಡೆಸಿ ಚರ್ಚೆ ಮಾಡಿಲ್ಲ, ನಾವು ಏನು ಪಾಪ ಮಾಡಿದ್ದೀವಿ? ಸರ್ಕಾರಕ್ಕೆ ಪತ್ರ ಬರೆದು ಬೇರೆಯವರ ನೇಮಕಕ್ಕೆ ಆಗ್ರಹಿಸುತ್ತೇವೆ ಎಂದರು.

ರಾಜಧಾನಿಗೆ 60 ಕಿ.ಮೀ ದೂರವಿದ್ದರೂ ಕೋಲಾರ ಅಭಿವೃದ್ಧಿಯಾಗಿಲ್ಲ. ರಸ್ತೆಗಳು ಡಾಂಬರೀಕರಣವಾಗಿಲ್ಲ, 2.5 ಕೋಟಿ ರೂ. ಅನುದಾನ ವಾಪಸ್​ ಹೋಯಿತು. 5 ಕೋಟಿ ರೂ. ವಿಶೇಷ ಅನುದಾನ ತಂದರೂ, ಕ್ರಿಯಾಯೋಜನೆಗೆ ಸಹಕರಿಸಿಲ್ಲ. 15ನೇ ಹಣಕಾಸು ಯೋಜನೆ ಅನುಷ್ಠಾನಕ್ಕೆ ಸಹಕರಿಸಿಲ್ಲ. ಉಸ್ತುವಾರಿ ಸಚಿವರನ್ನೇ ಕೇಳಿದರೆ, ಸಂಸದರು ಮತ್ತು ಮಾಜಿ ಸಚಿವ ವರ್ತೂರು ಪ್ರಕಾಶ್​ಗೆ ಜವಾಬ್ದಾರಿ ಕೊಟ್ಟಿದ್ದೇನೆ ಎನ್ನುತ್ತಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೇದಿಕೆಯಲ್ಲಿ ಕೂರುತ್ತಾರೆ. ಶಿಷ್ಟಾಚಾರ ಪಾಲನೆ ಇದೆಯಾ? ಜಿಲ್ಲೆಯಲ್ಲಿ 10ಮಂದಿ ಶಾಸಕ, ಎಂಎಲ್ಸಿಗಳಿದ್ದರೂ ಎಲ್ಲರನ್ನು ರ್ನಿಲಕ್ಷಿಸಿ ಹೀಗೆ ಮಾಡುತ್ತಿರುವುದು ದುರಹಂಕಾರದ ಪರಮಾವಧಿ ಎಂದರು.

ಜಿಲ್ಲೆಯಲ್ಲಿ ಹಿಪು$್ಪನೇರಳೆ ಸೇರಿ ವಿವಿಧ ಬೆಳೆಗಳಿಗೆ ರೋಗಗಳು ಇವೆ. ನೀರಿನ ಸಮಸ್ಯೆ, ವಿದ್ಯುತ್​ ಸಮಸ್ಯೆ ಇದೆ. ಬಿಜೆಪಿ ಶಾಸಕರು ಜಿಲ್ಲೆಯಲ್ಲಿ ಇಲ್ಲದ ಕಾರಣ ತಾರತಮ್ಯ ಮಾಡುವುದು ಸರಿಯಲ್ಲ. ಕೆಡಿಪಿ ಸಭೆಗೆ ದಿನಾಂಕ ನೀಡುತ್ತಿಲ್ಲವೆಂದು ಜಿಪಂ ಸಿಇಒ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದರು.

ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ನಿಷ್ಕ್ರಿಯರಾಗಿದ್ದಾರೆ. ಇತರ ಶಾಸಕರು ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ತಮ್ಮ ಭ್ರಷ್ಟಾಚಾರಗಳನ್ನು ಹೊರಗೆ ತಂದುಕೊಳ್ಳುತ್ತಿದ್ದಾರೆ. ಘಟಬಂಧನ್​ ನಾಯಕ ಕೆ.ಆರ್​.ರಮೇಶ್​ಕುಮಾರ್​ಗೆ ಉಸ್ತುವಾರಿ ಸಚಿವರನ್ನು ಎಚ್ಚರಿಸಿ ಕೆಲಸ ಮಾಡಿಸಿಕೊಳ್ಳುವ ಆಸಕ್ತಿಯಿಲ್ಲ. ಜಿಪಂನಲ್ಲಿ ರೈತ ಮಾಲ್​ ಸಂಬಂಧ ಸಭೆ ಕರೆಯುತ್ತಾರೆ. ನಮಗೆ ಮಾಹಿತಿ ನೀಡುವುದಿಲ್ಲ. ಎಲ್ಲವನ್ನೂ ನಾವು ಪ್ರಶ್ನಿಸುತ್ತೇವೆ ಎನ್ನುವ ಕಾರಣಕ್ಕೆ ಡಿಸಿಸಿ ಬ್ಯಾಂಕ್​ ಸೇರಿ ಕೆಲವೆಡೆ ನಮ್ಮನ್ನು ದೂರ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಲಭೆಗಳ ಹಿಂದೆ ಜಮೀರ್​: ರಾಜ್ಯದಲ್ಲಿ ನಡೆದಿರುವ ಗಲಭೆಗಳ ಹಿಂದಿರುವ ಮಾಸ್ಟರ್​ ಮೈಂಡ್​ ಶಾಸಕ ಜಮೀರ್​ ಅಹಮದ್​ ಖಾನ್​ ಎಂದು ಎಂಎಲ್ಸಿ ಗೋವಿಂದರಾಜು ಆರೋಪಿಸಿದರು. ಗಲಭೆ ನಡೆಸಿದವರಿಗೆ ಸಂತ್ರಸ್ತರು ಎಂದು ಹೇಳಿ ಆಹಾರದ ಕಿಟ್​, ಹಣ ನೀಡುತ್ತಾರೆ. ಇದನ್ನು ನೋಡಿದರೆ ಅವರೇ ಗಲಭೆಗಳ ಹಿಂದಿನ ಮಾಸ್ಟರ್​ ಮೈಂಡ್​ ಅನಿಸುತ್ತಿದೆ. ಗಲಭೆಕೋರರಿಗೆ ಶಿಕ್ಷೆಯಾಗಬೇಕೇ ಹೊರತು ಅವರಿಗೆ ಸಹಾಯ ಮಾಡಬಾರದು. ಪ್ರಚೋದನೆ ಮಾಡಿದವರಿಗೆ ಸಹಾಯ ಮಾಡುವುದು ಪ್ರಜಾಪ್ರಭುತ್ವದ ವಿರೋಧಿ ನೀತಿ ಎಂದರು.

ಜೆಡಿಎಸ್​ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಮುಖಂಡರಾದ ಸಿಎಂಆರ್​ ಶ್ರೀನಾಥ್​, ವಕ್ಕಲೇರಿ ಇ.ರಾಮಚಂದ್ರ, ಬಣಕನಹಳ್ಳಿ ನಟರಾಜ್​, ರಮೇಶ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net