30 ಜನರ ಗಂಟಲ ದ್ರವದ ಮಾದರಿ ಪರೀಕ್ಷೆಗೆ

4SIRSI2
Published on

ಶಿರಸಿ: ದೆಹಲಿಯ ತಬ್ಲಿಗಿ ಜಮಾತ್​ಗೆ ತೆರಳಿದ್ದ ಹಾಗೂ ಅವರ ಸಂಪರ್ಕಕ್ಕೆ ಬಂದ 30 ಜನರನ್ನು ಜಿಲ್ಲೆಯಲ್ಲಿ ಗುರುತಿಸಿ ಅವರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದರು.

ಇಲ್ಲಿನ ಅತೀ ಹಿಂದುಳಿದ ಪ್ರದೇಶವಾದ ಗಣೇಶನಗರದ ಗೋಸಾವಿಗಲ್ಲಿಯ ಸುಮಾರು 70 ಕುಟುಂಬಗಳಿಗೆ ಶನಿವಾರ ಕೆಎಂಎಫ್ ವತಿಯಿಂದ 140 ಲೀಟರ್ ಹಾಲಿನ ಪ್ಯಾಕೆಟ್ ವಿತರಿಸಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಜಮಾತ್ ಘಟನೆಗೆ ಸಂಬಂಧಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಯೋಗಾಲಯ ವರದಿ ಬಂದ ನಂತರ ಕರೊನಾ ಗಂಭೀರತೆ ಅರಿವಿಗೆ ಬರಲಿದೆ. ದಾಂಡೇಲಿಯಿಂದ ದೆಹಲಿಗೆ ಜಮಾತ್​ಗೆ ತೆರಳಿದ್ದ 8 ಜನರ ಕರೊನಾ ಪರೀಕ್ಷೆ ನಡೆಸಿದ್ದು, ಅವರಲ್ಲಿ ರೋಗ ಪತ್ತೆಯಾಗಿಲ್ಲ ಎಂದರು.

ಕರೊನಾ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 8 ಕೋವಿಡ್ ಸೋಂಕಿತರಿದ್ದು, ಶೀಘ್ರದಲ್ಲಿ ಗುಣಮುಖರಾಗಲಿದ್ದಾರೆ. ಸರ್ಕಾರದ ವ್ಯವಸ್ಥೆ ಮತ್ತು ಚಿಕಿತ್ಸೆ ಬಗ್ಗೆ ಸೋಂಕಿತರು ತೃಪ್ತರಾಗಿದ್ದಾರೆ. ಹಾಗಾಗಿ ಒಂದೊಮ್ಮೆ ವೈರಸ್ ಸೋಂಕಿದರೆ ಭಯ ಬೀಳುವ ಅಗತ್ಯವಿಲ್ಲ ಎಂದರು. ಆರೋಗ್ಯ ಸಮಸ್ಯೆ ಇದ್ದರೆ ಆಡಳಿತದ ಗಮನಕ್ಕೆ ತರಬೇಕು. ಸುಳ್ಳು ಸುದ್ದಿಗೆ ಆಸ್ಪದ ನೀಡಬಾರದು ಎಂದ ಅವರು, ಭಟ್ಕಳದಲ್ಲೂ ಕರೊನಾ ಸನ್ನಿವೇಶ ನಿಯಂತ್ರಣದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಆರೋಗ್ಯ ರಕ್ಷಣಾ ಸಾಧನಗಳ ಸಂಗ್ರಹವಿದೆ. ಮನೆಮನೆ ಸಮೀಕ್ಷೆ ಕೂಡ ಪೂರ್ಣಗೊಂಡಿದೆ. ಮತ್ತೊಮ್ಮೆ ಸಮೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.

ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಮಾತನಾಡಿ, ಎಲ್ಲೆಲ್ಲಿ ಹಾಲಿನಿಂದ ವಂಚಿತರಾಗುತ್ತಿರುವ ಜನರಿದ್ದಾರೋ ಅವರನ್ನು ಗುರುತಿಸಿ ಏ.14ರವರೆಗೆ ಉಚಿತವಾಗಿ ಹಾಲು ವಿತರಿಸಲು ಕೆಎಂಎಫ್ ತೀರ್ವನಿಸಿದೆ ಎಂದರು.

ಈ ವೇಳೆ ಎಸ್ಪಿ ಶಿವಪ್ರಕಾಶ ದೇವರಾಜು, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಡಿವೈಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ಬಿ.ಯು., ಪೌರಾಯುಕ್ತ ರಮೇಶ ನಾಯಕ ಇದ್ದರು.

ಕಾರ್ವಿುಕ ಇಲಾಖೆಯಿಂದ ಕಾರ್ವಿುಕರ ಖಾತೆಗೆ ಹಾಕುತ್ತಿರುವ 1,000 ರೂ. ಧನ ಸಹಾಯವನ್ನು ಯಾವುದೇ ಕಾರಣಕ್ಕೂ ಬ್ಯಾಂಕ್​ನವರು ಸಾಲದ ರೂಪದಲ್ಲಿ ಮುರಿದುಕೊಳ್ಳಬಾರದು. ಲಾಕ್​ಡೌನ್ ಹಿನ್ನಲೆಯಲ್ಲಿ ಕೆಲಸ ಇಲ್ಲದಂತಾಗಿರುವ ಜನರ ಜೀವನಕ್ಕಾಗಿ ಅದನ್ನು ನೀಡಲಾಗುತ್ತಿದೆ.ಡಾ. ಹರೀಶಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

ಕರೊನಾ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರು, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಯಾರೂ ಗುಂಪಾಗಿ ಕಾರ್ಯಕ್ರಮ ಮಾಡದಂತೆಯೂ ಎಚ್ಚರಿಸಲಾಗಿದೆ. ತಬ್ಲಿಘಿ ಜಮಾತ್ ಪ್ರಕರಣ ಸಂಬಂಧ ಜಿಲ್ಲೆಗೆ ಸಂಬಂಧಪಟ್ಟರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸುವ ಕಾರ್ಯ ಚಾಲ್ತಿಯಲ್ಲಿದೆ. | ಶಿವಪ್ರಕಾಶ ದೇವರಾಜು ಎಸ್​ಪಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net