

ರಾಮನಗರ: ಸಾವಿರಾರು ಮಂದಿಗೆ ಬದುಕು ಕಟ್ಟಿಕೊಟ್ಟ ತಾಲೂಕಿನ ವಾಜರಹಳ್ಳಿಯ ಎಡಿ ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗುರುವಾರದಿಂದ ಬಾಗಿಲು ಬಂದ್ ಮಾಡಿದೆ. ಸುಮಾರು 30 ವರ್ಷಗಳಿಂದಲೂ ಜಿಲ್ಲೆ ಸೇರಿ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾವಿರಾರು ಮಂದಿಗೆ ಕೌಶಲ ತರಬೇತಿ ನೀಡುವ ಮೂಲಕ ಜೀವನೋಪಾಯ ಕಂಡುಕೊಳ್ಳುವಂತೆ ಮಾಡಿತ್ತು. ಇದೀಗ ಜಿಲ್ಲೆಗೆ ಒಂದೇ ತರಬೇತಿ ಕೇಂದ್ರ ಎನ್ನುವ ನಿಯಮದೊಂದಿಗೆ ಹಾರೋಹಳ್ಳಿ ಸಮೀಪದ ತರಬೇತಿ ಕೇಂದ್ರಕ್ಕೆ ವಾಜರಹಳ್ಳಿ ಕೇಂದ್ರವನ್ನು ವಿಲೀನ ಮಾಡಲಾಗುತ್ತಿದೆ.
ಕೆನರಾ ಬ್ಯಾಂಕ್‌ನ ಸಂಸ್ಥೆ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಅಡಿಯಲ್ಲಿ ಎಡಿ ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ವಾಜರಹಳ್ಳಿ ಬಳಿ 1993ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು, 1996ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ದೇವೇಗೌಡರು ತರಬೇತಿ ಸಂಸ್ಥೆಯ ಕಟ್ಟಡ ಉದ್ಘಾಟಿಸಿದ್ದರು. ಅಂದಿನಿಂದ 2022ರ ಜ.26ರವರೆಗೆ ಸುಮಾರು 28 ಸಾವಿರ ಮಂದಿ ಯುವಕ/ಯುವತಿಯರು ಟೇಲರಿಂಗ್, ಮೋಟಾರ್ ರೀವೈಂಡಿಂಗ್ ಸೇರಿ ಸುಮಾರು 50ಕ್ಕೂ ಹೆಚ್ಚು ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದುಕೊಂಡು ಸ್ವಂತ ಉದ್ಯೋಗ ಆರಂಭಿಸಿದ್ದಾರೆ.
ನಿಲ್ಲಿಸಿಬಿಡಿ ಎಂದರು: ಕಳೆದ 30 ವರ್ಷಗಳಿಂದ ಜಿಲ್ಲೆಯ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದ ಸಂಸ್ಥೆಯನ್ನು ಮುಚ್ಚಿ ಬಿಡಿ, ಇರುವ ಪರಿಕರಗಳನ್ನು ಹಾರೋಹಳ್ಳಿಗೆ ಸಾಗಿಸಿ ಬಿಡಿ ಎನ್ನುವ ಸಂದೇಶ ಕಳೆದ ಸೋಮವಾರವಷ್ಟೇ ಸ್ಥಳೀಯ ಅಧಿಕಾರಿಗಳಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ತರಬೇತಿ ಕೇಂದ್ರದಲ್ಲಿರುವ ಸಿಬ್ಬಂದಿ ನೀಡುವ ಮಾಹಿತಿಯಂತೆ ಜಿಲ್ಲೆಗೆ ಒಂದೇ ತರಬೇತಿ ಕೇಂದ್ರ ಇರಬೇಕು ಎನ್ನುವ ಕಾರಣಕ್ಕೆ ಹಾರೋಹಳ್ಳಿ ಕೇಂದ್ರದಲ್ಲಿ ವಿಲೀನಗೊಳಿಸಲಾಗುತ್ತಿದೆ. ಈ ಮೊದಲು ಹಾರೋಹಳ್ಳಿ ಕೇಂದ್ರದಲ್ಲಿ ಮಹಿಳೆಯರಿಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ವಿವಿಧ ವಿಭಾಗಗಳಲ್ಲಿ ಕೌಶಲ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ಜಟಾಪಟಿ: ಲಭ್ಯ ಮಾಹಿತಿ ಪ್ರಕಾರ ವಾಜರಹಳ್ಳಿಯಲ್ಲಿನ ಎಡಿ ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಮಂಜೂರಾಗಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆಯೊಂದಿಗೆ ಕಾನೂನಾತ್ಮಕ ಹೋರಾಟ ಮಾಡಲು ಸಾಧ್ಯವಾಗದೆ ಈ ಸಂಸ್ಥೆಯನ್ನು ಹಾರೋಹಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸಂಸ್ಥೆಗೆ ವಾಜರಹಳ್ಳಿ ಸರ್ವೇ ನಂ.33ರಲ್ಲಿ 3 ಎಕರೆ ಜಾಗವನ್ನು ಈ ಹಿಂದೆ ಮಂಜೂರು ಮಾಡಿಕೊಡಲಾಗಿದೆ. ಆದರೆ ಈ ಜಾಗ ಮೈಸೂರು ಮಹಾರಾಜರು ಇಲಾಖೆಗೆ ನೀಡಿದ ಜಾಗ ಎನ್ನುವುದು ಅರಣ್ಯ ಇಲಾಖೆ ವಾದವಾಗಿದೆ. ಈ ಕಾರಣಕ್ಕಾಗಿಯೇ ಸಂಸ್ಥೆಯಲ್ಲಿ ಸುಮಾರು 10 ವರ್ಷಗಳಿಂದಲೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಜಟಾಪಟಿ ಮಾಡಲು ಸಿದ್ಧವಿಲ್ಲದ ಕೆನರಾ ಬ್ಯಾಂಕ್ ಮತ್ತು ಎಡಿ ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿಲೀನ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.
ಸ್ಥಳೀಯರಿಗೆ ತೊಂದರೆ: ವಾಜರಹಳ್ಳಿಯಲ್ಲಿನ ಸಂಸ್ಥೆ ಬೆಂಗಳೂರು-ಮೈಸೂರು ಹೆದ್ದಾರಿ ಸಮೀಪವೇ ಇದ್ದು, ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿಯಿಂದ ತರಬೇತಿಗೆ ಬರುವವರಿಗೆ ಅನುಕೂಲವಾಗಿತ್ತು. ಇದೀಗ ಹಾರೋಹಳ್ಳಿ ಈ ಕೇಂದ್ರದೊಂದಿಗೆ ವಿಲೀನ ಮಾಡುವುದರಿಂದ ಈ ಮೂರು ತಾಲೂಕುಗಳಿಂದ ಬರುವವರಿಗೆ ತೊಂದರೆ ಆಗುವುದಂತೂ ಖಂಡಿತ.
ಜನಪ್ರತಿನಿಧಿಗಳೇ ನೋಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ ಅಭಿವೃದ್ಧಿಗೆ ಸಾಕಷ್ಟು ಹಣ ವೆಚ್ಚ ಮಾಡುತ್ತಿವೆ. ಇದರಲ್ಲಿ ಸ್ಥಳೀಯವಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದ ಸಂಸ್ಥೆ ಬಾಗಿಲು ಹಾಕುತ್ತಿರುವುದರಿಂದ ಈ ಭಾಗದ ಯುವ ಸಮುದಾಯಕ್ಕೆ ತೊಂದರೆ ಆಗುವುದು ಖಚಿತ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ಇರುವ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ. ಈ ಮೂಲಕ ಯುವಜನತೆಗೆ ಅಗತ್ಯವಿರುವ ಸಂಸ್ಥೆಯನ್ನು ಉಳಿಸಿಕೊಂಡಂತಾಗುತ್ತದೆ.
ಹಾರೋಹಳ್ಳಿ ಕೇಂದ್ರಕ್ಕೆ ಎಲ್ಲ ಪರಿಕರಗಳನ್ನು ಸ್ಥಳಾಂತರ ಮಾಡುವಂತೆ ಮೇಲಿಂದ ಸೂಚನೆ ಬಂದಿದೆ. ಇದರ ಹೊರತಾಗಿ ನಮಗೆ ಏನೂ ಗೊತ್ತಿಲ್ಲ. ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಸಾವಿರಾರು ಮಂದಿ ಬಾಳಿಗೆ ಬೆಳಕಾಗಿರುವ ಸಂಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡಬೇಕಿದೆ. ಈ ಭಾಗದ ಯುವ ಸಮುದಾಯಕ್ಕೆ ಬೇಕಾದ ತರಬೇತಿ ನೀಡುತ್ತಿದ್ದ ಸಂಸ್ಥೆ ಬಾಗಿಲು ಹಾಕಲು ಬಿಡುವುದಿಲ್ಲ. ಗಾಣಕಲ್ ನಟರಾಜ್, ತಾಪಂ ಮಾಜಿ ಅಧ್ಯಕ್ಷ