

ಮುಂಡರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ತಹಸೀಲ್ದಾರ್ ಧನಂಜಯ ಮಾಲಗತ್ತಿ ಅವರಿಗೆ ಮನವಿ ಸಲ್ಲಿಸಿದರು.
ಮಳೆಯಿಂದ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಸಂಪೂರ್ಣ ಹಾಳಾಗಿವೆ. ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಸೂರ್ಯಕಾಂತಿ ತೆನೆ ಕಾಳುಕಟ್ಟುತ್ತಿಲ್ಲ. ವಿವಿಧ ಬೆಳೆಗಳು ಹಳದಿ ರೋಗಕ್ಕೆ ತುತ್ತಾಗುತ್ತಿವೆ. ಸರ್ಕಾರ ರೈತರ ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಬಹುತೇಕ ರೈತರು ಮೆಕ್ಕೆಜೋಳ ಹಾಗೂ ಸೂರ್ಯಕಾಂತಿಯನ್ನು ಬೆಳೆದಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಬೆಂಬಲ ಬೆಲೆ ಘೋಷಣೆ ಮಾಡಿದೆ. ತಾಲೂಕು ಆಡಳಿತವು ಪಟ್ಟಣದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು. ಆ ಮೂಲಕ ರೈತರ ನಷ್ಟ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಈ ವರ್ಷ ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ಅಪೂರ್ಣವಾಗಿದೆ. ನೀರಾವರಿ ಜಮೀನಿನಲ್ಲಿ ಬೆಳೆದಿದ್ದ ಬೆಳೆಯೂ ನಾಶವಾಗಿದೆ. ಮುಂಡರಗಿ ತಾಲೂಕನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ರೈತ ಮುಖಂಡರಾದ ಈರಣ್ಣ ಗಡಾದ, ಚಂದ್ರಕಾಂತ ಉಳ್ಳಾಗಡ್ಡಿ, ಶರಣಪ್ಪ ಚನ್ನಳ್ಳಿ, ಶರಣಪ್ಪ ಕಂಬಳಿ, ಚಂದ್ರಪ್ಪ ಗಡ್ಡಿ, ದುರುಗೋಜಪ್ಪ ಗಣಾಚಾರಿ, ಚಿದಾನಂದಪ್ಪ ಗೋಡಿ, ದೇವಪ್ಪ ಪೂಜಾರ, ಯಮುನಪ್ಪ ಭಜಂತ್ರಿ, ಹನುಮಪ್ಪ ಉಪ್ಪಾರ, ಅಂದಪ್ಪ ಹಂದ್ರಾಳ, ರಾಘವೇಂದ್ರ ಅಬ್ಬಿಗೇರಿ, ಇತರರಿದ್ದರು.