

ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ 30 ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ಗಾಯಗೊಂಡ ಘಟನೆ ತಾಲೂಕಿನ ಆರೊಳ್ಳಿಯ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿಹಳ್ಳಿಯ ಕೆಪಿ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರು.
ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ವಿದ್ಯಾರ್ಥಿಗಳಾದ ಭವಾನಿ, ಅಭಿಷೇಕ, ಬೈರೇಗೌಡ ಹಾಗೂ ಭವ್ಯಾ ಎನ್.ಕೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 26 ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ರೇಣು ಸಿ.ಆರ್. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲೆಯ 94 ವಿದ್ಯಾರ್ಥಿಗಳು ಎರಡು ಬಸ್ಸುಗಳಲ್ಲಿ ಮಂಗಳವಾರ ರಾತ್ರಿ ಪ್ರವಾಸ ಹೊರಟಿದ್ದರು. ಗೊಟಗೋಡಿ ರಾಕ್‌ಗಾರ್ಡನ್, ಮುಂಡಗೋಡ, ಶಿರಸಿ, ಯಾಣ, ಗೋಕರ್ಣ ವೀಕ್ಷಿಸಿ ಗುರುವಾರ ರಾತ್ರಿ ಕೋಲಾರಕ್ಕೆ ತೆರಳುತ್ತಿದ್ದರು. ಹೊನ್ನಾವರದಿಂದ 3 ಕಿ.ಮೀ. ದೂರದಲ್ಲಿರುವ ಆರೋಳ್ಳಿಯ ಅಪಾಯಕಾರಿ ತಿರುವಿನಲ್ಲಿ ಒಂದು ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳೀಯರು, ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಪೊಲೀಸರ ಸಹಾಯದಿಂದ ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತು.
ಉಳಿದ ವಿದ್ಯಾರ್ಥಿಗಳನ್ನು ಹೊನ್ನಾವರದ ಪ್ರಭಾತನಗರದ ಸಾಮರ್ಥ್ಯ ಸೌಧದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಪ್ರಭಾತನಗರ ಶಾಲೆಯಲ್ಲಿ ಉಪಾಹಾರದ ವ್ಯಸ್ಥೆಯನ್ನು ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಲ್ಪಿಸಿಕೊಟ್ಟರು. ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ, ಸತೀಶ ನಾಯ್ಕ ಆಸ್ಪತ್ರೆಗೆ ಮತ್ತು ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.