

ಬೆಂಗಳೂರು: ಕರೊನಾ ಕಾರಣದಿಂದ ಶೈಕ್ಷಣಿಕ ವರ್ಷ ಆರಂಭ ವಿಳಂಬವಾಗುತ್ತಿರುವ ಕಾರಣ ಪಿಯು ಪಠ್ಯಕ್ರಮದಲ್ಲಿ ಶೇ.30 ಕಡಿತಗೊಳಿಸಲು ಪ.ಪೂ ಶಿಕ್ಷಣ ಇಲಾಖೆ ಮುಂದಾಗಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘವು ಪ್ರಾಥಮಿಕ ಮತ್ತು ಪ್ರೌಢ ತರಗತಿಯ ಶೇ.30 ಪಠ್ಯ ಕಡಿತ ಮಾಡಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ನೀಡಿದೆ. ಇದೇ ಮಾದರಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಪಠ್ಯ ಕಡಿತ ಮಾಡಿದ್ದು, ಸರ್ಕಾರದ ಒಪ್ಪಿಗೆ ಪಡೆಯಲು ಕಳುಹಿಸಿದೆ. ಆದರೆ, ಈವರೆಗೆ ಶಿಕ್ಷಣ ಇಲಾಖೆಯಿಂದ ಪಠ್ಯ ಕಡಿತಕ್ಕೆ ಅನುಮೋದನೆ ಸಿಕ್ಕಿಲ್ಲ. ಶಾಲಾ-ಕಾಲೇಜು ಯಾವಾಗ ಆರಂಭವಾಗುತ್ತವೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಆದರೆ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅವಧಿಗೆ ಶಾಲಾ-ಕಾಲೇಜು ಆರಂಭ ಮಾಡಿದರೆ, ಎಷ್ಟು ಪಠ್ಯ ಬೋಧನೆ ಮಾಡಬೇಕಾಗುತ್ತದೆ? ಎಂಬ ಲೆಕ್ಕಚಾರದ ಮೇಲೆ ಶೇ.30 ಪಠ್ಯ ಕಡಿತ ಮಾಡಲಾಗಿದೆ.
ಪದವಿ ಕಾಲೇಜುಗಳ ಕತೆ ಏನು?: ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗಾಗಲೆ ಪ್ರಮೋಟ್ ಮಾಡಿದ್ದು, ವಿವಿಗಳು ಯುಜಿಸಿ ನಿಯಮಗಳಿಗಾಗಿ ಕಾಯುತ್ತಿವೆ. ಎಷ್ಟು ಪ್ರಮಾಣದಲ್ಲಿ ಪಠ್ಯಕ್ರಮ ಕಡಿತ ಮಾಡಬೇಕೆಂಬ ಬಗ್ಗೆ ಆಲೋಚನೆ ಮಾಡಿಲ್ಲ. ಯುಜಿಸಿ ಮಾರ್ಗಸೂಚಿ ನಂತರ ರಾಜ್ಯದ ಹಂತದಲ್ಲಿ ಕೆಲವು ಸೂಚನೆಗಳಿಗೆ ತಿದ್ದುಪಡಿ ತಂದು ಪಾಲನೆ ಮಾಡುವಂತೆ ವಿವಿಗಳಿಗೆ ಸೂಚನೆ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.