ವಿಜಯವಾಣಿ ಸುದ್ದಿಜಾಲ ವಿಜಯಪುರ
ಭಾರಿ ಮಳೆಯಿಂದ ಅಮಾನಿ ಕೆರೆ ತುಂಬಿ ಹರಿಯುತ್ತಿದ್ದು, ರಾಜಕಾಲುವೆ ಪಕ್ಕದಲ್ಲಿರುವ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಮಂಗಳವಾರ ಸ್ಥಳಾಂತರ ಮಾಡಲಾಯಿತು.
ಮಳೆಯಿಂದಾಗಿ ಅಪಾರ ಬೆಳೆ ನಷ್ಟವಾಗಿವೆ. ಕೆಲ ಗ್ರಾಮಗಳು ಜಲಾವೃತವಾಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ವರ್ಷವೂ ಇದೇ ಪ್ರಮಾಣದಲ್ಲಿ ಮಳೆ ಬಂದು ವೆಂಕಟಗಿರಿಕೋಟೆ ಕೆರೆ ಕೋಡಿ ಒಡೆದು, ಅಲ್ಲಿಂದ ಗೋಣೂರು ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದರು.
ನೀರಿನ ಹರಿವು ಹೆಚ್ಚಾಗಿ ಮನೆಯಲ್ಲೇ ಸಿಲುಕಿಕೊಂಡ ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದರು. ವೆಂಕಟಗಿರಿಕೋಟೆ ಕೆರೆ ಕೋಡಿ ಹರಿಯುತ್ತಿದ್ದು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಬದಲಿ ದಾರಿ: ಪಟ್ಟಣದಿಂದ ಶಿಡ್ಲಘಟ್ಟ ಹೋಗುವ ಮುಖ್ಯರಸ್ತೆ ನೀರಿನಿಂದ ಸಂಪೂರ್ಣ ಮುಳುಗಿದ್ದು, ಜಂಗಮಕೋಟೆ ಮಾರ್ಗವಾಗಿ ವಾಹನಗಳು ಸಾಗಲು ಅವಕಾಶ ಕಲ್ಪಿಸಲಾಯಿತು. ಶಿಡ್ಲಘಟ್ಟ ಮುಖ್ಯರಸ್ತೆಯ ಬಳಿ ಇರುವ ಶೃಂಗೇರಿ ಪ್ರೌಢಶಾಲೆ ಮುಳಗಿದ ಕಾರಣ ರಜೆ ೋಷಿಸಲಾಗಿದೆ.