ರೇಷ್ಮೆ ಬೆಳೆಗೆ 30 ರೂ. ಪ್ರೋತ್ಸಾಹಧನ ನೀಡಲು ಚಿಂತನೆ

30-KGL PHOTO-2
Published on

ಕೊಳ್ಳೇಗಾಲ: ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡಲು ಸರ್ಕಾರ ಕ್ರಮ ವಹಿಸಲಿದ್ದು, ಈ ಬಾರಿ ಬಜೆಟ್‌ನಲ್ಲಿ 1 ಕೆಜಿ ರೇಷ್ಮೆಗೆ 30 ರೂ. ಪ್ರೋತ್ಸಾಹಧನ ನೀಡಲು ಚಿಂತಿಸಲಾಗಿದೆ ಎಂದು ರೇಷ್ಮೆ, ಪಶುಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾಹಿತಿ ನೀಡಿದರು.

ಪಟ್ಟಣದ ಮುಡಿಗುಂಡ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ನೂತನ ದ್ವಿತಳಿ ಘಟಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ರೇಷ್ಮೆ ಬೆಳೆಗೆ ಹೆಸರುವಾಸಿ. ಈ ಹಿಂದೆ ಇಲ್ಲಿನ ರೇಷ್ಮೆಗೆ ಭಾರಿ ಬೇಡಿಕೆ ಇತ್ತು. ಈಗಲೂ ಇದೆ. ನೀರಾವರಿ ವ್ಯವಸ್ಥೆ ಬಂದ ಮೇಲೆ ರೇಷ್ಮೆ ಬೆಳೆಯುವುದು ಕಡಿಮೆಯಾಗಿದೆ. ಆದರೀಗ ಮುಂಬರುವ ದಿನಗಳಲ್ಲಿ ರೇಷ್ಮೆ ಬೆಳೆ ಬೆಳೆಯುವಂತೆ ಬೆಳೆಗಾರರನ್ನು ಪ್ರೋತ್ಸಾಹಿಸಲಾಗುವುದು ಎಂದರು.

ಸಂತೇಮರಳ್ಳಿ, ಮಾಂಬಳ್ಳಿ, ಮುಡಿಗುಂಡ ಹಾಗೂ ಕೊಳ್ಳೇಗಾಲ ರೇಷ್ಮೆ ಕಾರ್ಖಾನೆಗಳು ಮುಚ್ಚಿ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. ಕಟ್ಟಡಗಳು ಹಾಳಾಗಲು ಅವಕಾಶ ನೀಡುವುದಿಲ್ಲ. ಇವುಗಳನ್ನು ಮತ್ತೆ ನವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, 2013-17 ನೇ ಸಾಲಿನಲ್ಲಿ ಎಸ್. ಜಯಣ್ಣ ಅವರು ಶಾಸಕರಾಗಿದ್ದಾಗ 2.66 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿತ್ತು. ಇದೀಗ ನಮ್ಮ ಸರ್ಕಾರದ ಅವಧಿಯಲ್ಲೇ ಉದ್ಘಾಟನೆಗೊಳ್ಳುತ್ತಿದೆ. ಚಾಮರಾಜನಗರ ರೇಷ್ಮೆಗೆ ಹೆಸರುವಾಸಿಯಾಗಿದ್ದು, ಈಗಲೂ ಈ ಹಿಂದಿನಷ್ಟೇ ಬೇಡಿಕೆ ಇದೆ. ಸರ್ಕಾರ ರೇಷ್ಮೆ ಅಭಿವೃದ್ಧಿಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲು ಸಿದ್ಧವಿದೆ ಎಂದರು.

ಮಾಜಿ ಶಾಸಕ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಸಿಇಒ ಆನಂದ್ ಪ್ರಕಾಶ್ ಮೀನಾ, ಎಎಸ್ಪಿ ಉದೇಶ್, ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ರಾಚಪ್ಪ, ನಗರಸಭೆ ಸದಸ್ಯ ಪುಷ್ಪಲತಾ, ಸುಮ ಸುಬ್ಬಣ್ಣ, ಕವಿತಾ, ಜಯಮೇರಿ, ರಾಘವೇಂದ್ರ, ಶಾಂತರಾಜು ಬಸ್ತೀಪುರ, ಸುರೇಶ್, ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net