

ಉಡುಪಿ: ಸ್ಥಳೀಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ವಿದ್ಯುತ್ ಸರಬರಾಜಿನಲ್ಲಿ ಹೊಸ ಪ್ರಯೋಗಶೀಲತೆಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 5 ಗ್ರಾಮಗಳನ್ನು ವಿದ್ಯುತ್ ಮಾದರಿ ಗ್ರಾಮಗಳನ್ನಾಗಿ ರೂಪಿಸುವ ಯೋಜನೆ ರೂಪಿಸಿದ್ದು, ಉಡುಪಿ ಜಿಲ್ಲೆಯಲ್ಲಿ 30 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
ಪ್ರತಿ ಹೋಬಳಿಗೆ ಒಂದು ಗ್ರಾಮದಂತೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ 5 ಗ್ರಾಮಗಳನ್ನು ಗುರುತಿಸಲಾಗಿದೆ. ಯೋಜನೆಯಲ್ಲಿ ವಿದ್ಯುತ್ ಮಾರ್ಗ, ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಸರಿಪಡಿಸುವುದು, ವೋಲ್ಟೇಜ್ ತೊಂದರೆಯಾಗದಂತೆ ಅಗತ್ಯ ಪರಿವರ್ತಕ ಜೋಡಣೆ, ಹಳೆಯ ತಂತಿಗಳ ಬದಲಾವಣೆ, ಆಧುನಿಕ ರೀತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆ, ತಂತಿಗಳಿಗೆ ಸುರಕ್ಷಾ ವ್ಯವಸ್ಥೆ, ಗ್ರಾಮದಲ್ಲಿ ಸೋಲಾರ್ ದೀಪ ಹಾಗೂ ಟೈಮರ್ ಸ್ವಿಚ್ ಅಳವಡಿಕೆ ಮೊದಲಾದ ಕಾಮಗಾರಿ ನಡೆಯಲಿದೆ.
12 ಕೋಟಿ ರೂ. ವೆಚ್ಚ: ಪ್ರತೀ ಗ್ರಾಮಕ್ಕೆ ತಲಾ ರೂ. 40 ಲಕ್ಷದಂತೆ ಒಟ್ಟು 12 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಗುತ್ತಿಗೆದಾರರಿಗೆ 2 ಗ್ರಾಮಗಳನ್ನು ವಹಿಸಲಾಗುತ್ತದೆ. ಎಲ್ಲ ಸಾಮಗ್ರಿ ಪೂರೈಕೆ ಮತ್ತು 1 ವರ್ಷ ನಿರ್ವಹಣೆ ಅವರದ್ದೇ ಜವಾಬ್ದಾರಿಯಾಗಿರುತ್ತದೆ. ಅನಂತರ ಮೆಸ್ಕಾಂಗೆ ಹಸ್ತಾಂತರಿಸಲಾಗುತ್ತದೆ.
ಆಯ್ಕೆಯಾದ ಗ್ರಾಮಗಳು: ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಮಟ್ಟು, ಹೇರೂರು, ಪಿಲಾರು, ಮರ್ಣೆ, ಬೆಳ್ಳರ್ಪಾಡಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಹೆಬ್ರಿ, ವರಂಗ, ಸಾಣೂರು, ಬಜಗೋಳಿ, ನಿಟ್ಟೆ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮೂಡುತೋನ್ಸೆ, 38 ಕಳತ್ತೂರು, ಹಲುವಳ್ಳಿ, ಕೆಂಜೂರು, ಹಾರಾಡಿ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಡೂರು, ಶಿರೂರು, ಅಮಾಸೆಬೈಲು, ಮಡಾಮಕ್ಕಿ, ಶೇಡಿಮನೆ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಂಪಾರು, ಸಿದ್ದಾಪುರ, ನಾಡಾ, ಕಾಲ್ತೋಡು, ಜಡ್ಕಲ್. ಉಡುಪಿ-ಚಿಕ್ಕಮಗಳೂರು ಸಂಸದರ ಕೋಟಾದಲ್ಲಿ ಆಯ್ಕೆಯಾದ ಗ್ರಾಮಗಳು: ಬೆಳ್ಮಣ್, ಅಲೆವೂರು, ನಾಲ್ಕೂರು, ಮೊಳಹಳ್ಳಿ, ಕಿರಿಮಂಜೇಶ್ವರ.
ಉಡುಪಿ ಜಿಲ್ಲೆಯಲ್ಲಿ 30 ಮಾದರಿ ವಿದ್ಯುತ್ ಗ್ರಾಮಗಳು ಆಯ್ಕೆಯಾಗಿವೆ. ಪ್ರತೀ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿವೆ. ವಿದ್ಯುತ್ ಪೋಲಾಗದಂತೆ ತಡೆಗಟ್ಟುವ ಜತೆಗೆ ಎಲ್ಲ ಕಡೆಗಳಲ್ಲಿ ತ್ರೀ ಫೇಸ್ ವಿತರಣೆ ಮಾರ್ಗ ಹಾಗೂ ನಿರಂತರ ವಿದ್ಯುಚ್ಛಕ್ತಿ ಲಭ್ಯತೆಗೆ ಆದ್ಯತೆ ನೀಡಲಾಗುವುದು. - ನರಸಿಂಹ ಪಂಡಿತ್ ಮೆಸ್ಕಾಂ ಅಧೀಕ್ಷಕ, ಉಡುಪಿ