ಕನ್ನಡ ಹಬ್ಬಕ್ಕೆ 30 ಕೋಟಿ ರೂ. ಅನುದಾನ

Kannada ratha
Published on

ಸಿದ್ದಾಪುರ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿದ್ದಾಪುರದ ಭುವನಗಿರಿಯ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಕನ್ನಡ ಜ್ಯೋತಿ ರಥಕ್ಕೆ ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ನಾಡದೇವಿ ಭುವನೇಶ್ವರಿಯ ಸ್ಥಳದಿಂದ ಕನ್ನಡ ಜ್ಯೋತಿಗೆ ಚಾಲನೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ ಎಂದು ನಾಮಕರಣ ಆಗಿ 50ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಬೇಕು. ಸಮ್ಮೇಳನದ ಯಶಸ್ಸಿಗೆ 30 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ, ಅಧ್ಯಾತ್ಮದಲ್ಲಿ ನಂಬಿಕೆ, ವಿಶ್ವಾಸ ಮುಖ್ಯ. ಅಂತಹ ವಿಶ್ವಾಸ ಇಟ್ಟು ಭುವನಗಿರಿಗೆ ಬಂದಿದ್ದೇವೆ. 86ನೇ ಸಾಹಿತ್ಯ ಸಮ್ಮೇಳನ 11ಲಕ್ಷ ಜನಸಂಖ್ಯೆಯೊಂದಿಗೆ ದಾಖಲೆ ನಿರ್ಮಾಣ ಮಾಡಿತು. ಮನೆಯಲ್ಲಿ ಹೇಗೆ ತಾಯಿಗೆ ಅಗ್ರಸ್ಥಾನ ನೀಡಲಾಗುತ್ತದೆಯೋ ಅಂತೆಯೇ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಸಿದ್ದಾಪುರ ತಾಲೂಕಿನವರು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಕಲೆ, ವಿಜ್ಞಾನ ಮತ್ತಿತರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿದ್ದಾರೆ. ಕಾರಣ ತಾಲೂಕನ್ನು ಕರ್ನಾಟಕದ ಪ್ರತಿನಿಧಿ ಎಂದರೆ ತಪ್ಪಾಗಲಾರದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕನ್ನಡ ನಾಡಿದ ನೆಲ,ಜಲ, ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಬೇಡ್ಕಣಿ ಗ್ರಾಪಂ ಅಧ್ಯಕ್ಷ ಉಲ್ಲಾಸ ಗೌಡರ್, ದೇವಾಲಯ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯಕ ನಿರ್ದೇಶಕಿ ಮಂಗಲಾ ನಾಯ್ಕ, ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾ ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಸ್ವಾಗತಿಸಿದರು. ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ವಂದಿಸಿದರು. ಪ್ರಾಚಾರ್ಯ ಎಂ. ಕೆ. ನಾಯ್ಕ ನಿರ್ವಹಿಸಿದರು. ನಂತರ ಕನ್ನಡ ಜ್ಯೋತಿ ರಥ ಭುವನಗಿರಿಯಿಂದ ಬೆಡ್ಕಣಿ, ಸಿದ್ದಾಪುರ ಮಾರ್ಗವಾಗಿ ಹೊನ್ನಾವರಕ್ಕೆ ತೆರಳಿತು. ಡೊಳ್ಳು ಕುಣಿತ ಹಾಗೂ ವೀರಗಾಸೆ ಕಲಾ ತಂಡಗಳು ರಥದ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net