ಲೋಕಾಯುಕ್ತ ಕಾಯ್ದೆಯಡಿ 30 ದೂರು ದಾಖಲು

21 Dwd 5 Justice K.N. Phaneendra
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಾರ್ವಜನಿಕರಿಂದ 95 ದೂರುಗಳನ್ನು ಸ್ವೀಕರಿಸಿದರು. 57 ಅರ್ಜಿಗಳ ಪ್ರಾಥಮಿಕ ವಿಚಾರಣೆ ನಡೆಸಲಾಯಿತು. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ 30 ದೂರುಗಳನ್ನು ದಾಖಲಿಸಿದ್ದಾರೆ. 38 ದೂರುಗಳನ್ನು ನ. 22ರಂದು ವಿಚಾರಣೆಗೆ ಬಾಕಿ ಇರಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ನೀರಿನ ಸಂಪರ್ಕವಿಲ್ಲ... ಬಾಕಿಯ ಬಡ್ಡಿ ಏರುತ್ತಲೇ ಇದೆ:

ಹುಬ್ಬಳ್ಳಿಯ ದೇಶಪಾಂಡೆನಗರದ ಬ್ಯಾಹಟ್ಟಿ ಪ್ಲಾಟ್‌ನಲ್ಲಿ 1995ರಿಂದ ನೀರು ಸರಬರಾಜು ಇಲ್ಲದಿದ್ದರೂ ನೀರಿನ ಬಿಲ್ ನೀಡಲಾಗುತ್ತಿದೆ. ಬಾಕಿ ಹಣದ ಬಡ್ಡಿ ಏರುತ್ತಲೇ ಇದೆ. ಈ ಬಗ್ಗೆ ನೂರಾರು ದೂರು ನೀಡಿದರೂ ಕ್ರಮವಾಗಿಲ್ಲ ಎಂದು ಆನಂದ ಸಂಶೀಕರ ಅಹವಾಲು ಸಲ್ಲಿಸಿ ಕಣ್ಣೀರಿಟ್ಟರು. ಪಾಲಿಕೆ ಅಽಕಾರಿಗಳ ವಿರುದ್ಧ ಗರಂ ಆದ ಉಪ ಲೋಕಾಯುಕ್ತರು, ಈಗ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಹುಬ್ಬಳ್ಳಿಯ ಪ್ರೆಸ್ಟಿಜ್ ಗಾರ್ಡನ್ ಲೇಔಟ್‌ಗೆ 5 ವರ್ಷಗಳಿಂದ ಮೂಲ ಸೌಕರ್ಯ ಕಲ್ಪಿಸಿಲ್ಲ. ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ, ಬೀದಿದೀಪಗಳಿಲ್ಲ. ಪಾಲಿಕೆಗೆ ಹತ್ತಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಹವಾಲು ಸಲ್ಲಿಸಿದರು. ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಪ ಲೋಕಾಯುಕ್ತರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲನಿಯಲ್ಲಿ ಕಾನೂನುಬಾಹಿರಿ ಕಟ್ಟಡ ನಿರ್ಮಾಣವಾಗುತ್ತಿರುವ ಕುರಿತು ನಿವಾಸಿಗಳು ದೂರಿದರು. ಕಟ್ಟಡ ನಿರ್ಮಿಸುವವರಿಗೆ ನೋಟಿಸ್ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾ. ಫಣೀಂದ್ರ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net