

ಹುಬ್ಬಳ್ಳಿ: ದೆಹಲಿಯ ಲೋದಿ ರಸ್ತೆಯಲ್ಲಿರುವ ಸತ್ಯಸಾಯಿ ಸಭಾಂಗಣದಲ್ಲಿ ನ.14 ಹಾಗೂ 15ರಂದು ನಡೆಯಲಿರುವ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಧಾರವಾಡ ಜಿಲ್ಲೆಯಿಂದ 30 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಜೀವ ದುಮಕನಾಳ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ರಾಷ್ಟ್ರೀಯ ಹೊರನಾಡು ಮಕ್ಕಳ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ. ಸುದಿತಿ ಅಂಬಳೆ ಸಮ್ಮೇಳನ ಅಧ್ಯಕ್ಷೆಯಾಗಿದ್ದು, ನೂತನ ಕೈಕಾಡೆ, ರಕ್ಷಿತಾ ಕಾಶಿನಾಥ, ಸ್ವಾತಿ ನಾಯ್ಕ, ರಕ್ಷಿತಾ, ವೆಂಕಟೇಶ ಕುಲಕರ್ಣಿ ಸಹ ಅಧ್ಯಕ್ಷರಾಗಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಕವಿ ಜಯಂತ ಕಾಯ್ಕಿಣಿ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮಕ್ಕಳಲ್ಲಿ ಸಾಹಿತ್ಯಾಭಿರುಚಿ, ಮಾತೃಭಾಷೆಯ ಅಭಿಮಾನ, ಸೃಜನಶೀಲತೆ, ವಿಚಾರವಂತಿಕೆ ಬೆಳೆಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಯಕ್ಷಗಾನ, ಕವನ ವಾಚನ, ಏಕಪಾತ್ರಾಭಿನಯ, ಜಾನಪದ ನೃತ್ಯ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ಮಕ್ಕಳಿಗೆ ನ. 10ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿಯ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಮೇಯರ್ ವೀಣಾ ಬರದ್ವಾಡ ಪಾಲ್ಗೊಳ್ಳುವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಲಲಿತಾ ಚಾಕಲಬ್ಬಿ, ಸುಮನ್, ಪಲ್ಲವಿ ಇದ್ದರು.