ಉಪ ಲೋಕಾಯುಕ್ತರಿಂದ 30 ಪ್ರಕರಣಗಳ ಇತ್ಯರ್ಥ

22 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್​. ಫಣೀಂದ್ರ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲಾಯಿತು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕುಂದು ಕೊರತೆಗಳ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಪಕ್ಷದಾರರೊಂದಿಗೆ ಸಭೆಯಲ್ಲಿ ವಿಚಾರಣೆ ನಡೆಸಿ, 30 ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.

ಗುರುವಾರ ಸಹ ಕೆಲ ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗಿತ್ತು. ಶುಕ್ರವಾರದ ಸಭೆಯಲ್ಲಿ ಗುರುತಿಸಿದ್ದ 57 ಪ್ರಕರಣಗಳನ್ನು ದೂರುದಾರ ಮತ್ತು ಪ್ರತಿವಾದಿಯಾದ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದರು. ಅವರಿಗೆ ಕರ್ನಾಟಕ ಲೋಕಾಯುಕ್ತ ವಿಚಾರಣೆ ವಿಭಾಗದ ಅಪರ ನಿಬಂಧಕ ಪಿ.ಶ್ರೀನಿವಾಸ ಪ್ರಕರಣಗಳ ಮಾಹಿತಿ ನೀಡಿದರು.

57 ಪ್ರಕರಣಗಳಲ್ಲಿ 30 ಪ್ರಕರಣಗಳನ್ನು ವಿಚಾರಣೆ ಮಾಡಿ, ಸೂಕ್ತ ನ್ಯಾಯ ತೀರ್ಮಾನದೊಂದಿಗೆ ಮುಕ್ತಾಯಗೊಳಿಸಲಾಯಿತು. ಉಳಿದಂತೆ ದೂರುದಾರರು ಗೈರು ಹಾಜರಾಗಿದ್ದ 8 ಮತ್ತು ಹೆಚ್ಚಿನ ವಿಚಾರಣೆ, ಪೂರಕ ದಾಖಲೆಗಳ ಅಗತ್ಯತೆ ಕಾರಣಕ್ಕೆ 19 ಪ್ರಕರಣಗಳು ಸೇರಿ ಒಟ್ಟು 27 ಪ್ರಕರಣಗಳನ್ನು ವಿಚಾರಣೆಗಾಗಿ ಮುಂದೂಡಲಾಯಿತು.

ಸಾಮಾಜಿಕ ನ್ಯಾಯ ಪಾಲಿಸಿ

ಇಲಾಖೆ ಅಧಿಕಾರಿಗಳು ಸಾಮಾಜಿಕ ನ್ಯಾಯ ಪಾಲಿಸದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದಾಗ ಸಮಗ್ರವಾಗಿ ಪರಿಶೀಲಿಸಬೇಕು. ಆದರೆ ಅಧಿಕಾರಿಗಳು ಇದ್ಯಾವುದನ್ನೂ ಮಾಡದೆ ನಾಮಕೆ ವಾಸ್ತೆ ಪರಿಶೀಲನೆ ನಡೆಸಿ ಹಿಂಬರಹ ನೀಡುತ್ತಾರೆ. ತಹಸೀಲ್ದಾರರು ಸೇರಿ ಬಹುತೇಕ ಅಧಿಕಾರಿಗಳು ಇದೇ ರೀತಿ ಮಾಡುತ್ತಿರುವ ಕಾರಣ ಜನರು ಪ್ರಕರಣ ದಾಖಲಿಸುತ್ತಿದ್ದಾರೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕೆ ಹೊರತು, ಮತ್ತಷ್ಟು ಉಲ್ಬಣಗೊಂಡು ಜನರು ಕಚೇರಿಗಳಿಗೆ ಅಲೆದಾಡುವಂತಾಗಬಾರದು ಎಂದು ಕೆ.ಎನ್​. ಫಣೀಂದ್ರ ಹೇಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಜಿಲ್ಲಾ ಲೋಕಾಯುಕ್ತ ಪೊಲೀಸ್​ ಅಧೀಕ್ಷಕ ಹನುಮಂತರಾಯ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net