

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ 2023-24ನೇ ಆರ್ಥಿಕ ಸಾಲಿನ ಫೆಬ್ರವರಿವರೆಗೆ 30.47 ದಶಲಕ್ಷ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದು ಹಿಂದಿನ ವರ್ಷಕ್ಕಿಂತ ಶೇ.5.10ರಷ್ಟು ಹೆಚ್ಚಳವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ತಿಳಿಸಿದರು.
ಯಾದವಗಿರಿಯ ಚಾಮುಂಡಿ ಅಧಿಕಾರಿಗಳ ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 68ನೇ ರೈಲ್ವೆ ಸಪ್ತಾಹದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಈ ಅವಧಿಯಲ್ಲಿ 10.503 ಮಿಲಿಯನ್ ಟನ್‌ಗಳಷ್ಟು ಸರಕುಗಳನ್ನು ಸಾಗಣೆ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.9.083 ಹೆಚ್ಚಳವಾಗಿದೆ. 2022-23ರಲ್ಲಿ 9.549 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿತ್ತು.
ಸರಕು ಸಾಗಣೆ ಆದಾಯ ಗಳಿಕೆ ಫೆಬ್ರವರಿವರೆಗೆ 907.91 ಕೋಟಿ ರೂ. ಆಗಿದ್ದು, ಹಿಂದಿನ ವರ್ಷದ ಅತ್ಯಧಿಕ ಗಳಿಕೆಯ ದಾಖಲೆ ಮುರಿದಿದೆ. ಹಿಂದಿನ ವರ್ಷ 897.28 ಕೋಟಿ ರೂ.ಆಗಿತ್ತು. ರೈಲ್ವೆ ಆದಾಯ ಕೂಡ ಅತ್ಯಧಿಕ 1330.17 ಕೋಟಿ ರೂ.ಆಗಿದೆ. ಹಿಂದಿನ 2022-23ರಲ್ಲಿ 1304.91 ಕೋಟಿ ರೂ. ಗಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಫೆಬ್ರವರಿವರೆಗೆ ವಿಭಾಗಾದ್ಯಂತ ಉದ್ದೇಶಿತ 395 ಕಿ.ಮೀ.ನಲ್ಲಿ(ಮಾರ್ಗ ಕಿಲೋಮೀಟರ್) 342.8 ಕಿ.ಮೀ.ಗಳಷ್ಟು ವಿದ್ಯುದ್ದೀಕರಣವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2022-2023ರ ಆರ್ಥಿಕ ವರ್ಷದಲ್ಲಿ ಅಸಾಧಾರಣ ಕಾರ್ಯಕ್ಷಮತೆ ತೋರಿದ ಅತ್ಯುತ್ತಮ ಉದ್ಯೋಗಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೈಲ್ವೆಗೆ ಅನುಕರಣೀಯ ಕೊಡುಗೆಗಳನ್ನು ನೀಡಿದ 22 ಪರಿಶ್ರಮಿ ಸಿಬ್ಬಂದಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ವಿನಾಯಕ್ ನಾಯಕ್, ಇ.ವಿಜಯಾ, ವಿಷ್ಣುಗೌಡ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆ.ಲೋಹಿತೇಶ್ವರ ಇತರರಿದ್ದರು.