

ಸೂಲಿಬೆಲೆ: ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಶುಕ್ರವಾರ ತಡರಾತ್ರಿ ಎಟಿಎಂಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು, ಗ್ಯಾಸ್ ಕಟರ್ ಮೂಲಕ ಎಟಿಎಂ ಕತ್ತರಿಸಿ 30.21 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಆಂಧ್ರ ಪ್ರದೇಶದ ನೋಂದಣಿಯ ಕಾರಿನಲ್ಲಿ ಬಂದಿರುವ ಖದೀಮರು, ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಎಟಿಎಂಗೆ ನುಗ್ಗಿ, ಸಿಸಿ ಕ್ಯಾಮರಾಗಳಿಗೆ ಬ್ಲ್ಯಾಕ್ ಸ್ಪ್ರೇ ಮಾಡಿದ್ದಾರೆ. ನಂತರ, ಗ್ಯಾಸ್ ಕಟರ್ ಬಳಸಿ ಎಟಿಎಂ ಮಷಿನ್ ಕತ್ತರಿಸಿ ಹಣ ದೋಚಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಬೆಡ್‌ಶೀಟ್ ಹೊದ್ದುಕೊಂಡು ಬಂದಿದ್ದ ಕಳ್ಳರ ಚಲನವಲನವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾತ್ರಿಯಷ್ಟೇ ಹಣ ತುಂಬಿದ್ದರು?: ಶುಕ್ರವಾರ ರಾತ್ರಿ 8ರ ಸುಮಾರಿನಲ್ಲಷ್ಟೇ ಎಟಿಎಂಗೆ ಹಣ ತುಂಬಲಾಗಿತ್ತು ಎನ್ನಲಾಗಿದ್ದು, ಶನಿವಾರ ಮುಂಜಾನೆ 3.12ರಲ್ಲಿ ಹಣ ದೋಚಿದ್ದಾರೆ. ಕೇವಲ 9 ನಿಮಿಷದಲ್ಲಿ ಕಳ್ಳರು ಕೃತ್ಯ ಎಸಗಿ 3.19ಕ್ಕೆ ಕಾಲ್ಕಿತ್ತಿದ್ದಾರೆ. ಮುಸುಕುಧಾರಿಗಳು, ಗ್ಯಾಸ್ ಕಟರ್ ಮೂಲಕ ಎಟಿಎಂ ಕತ್ತರಿಸುತ್ತ್ತ, ಹಣ ದೋಚುತ್ತಿರುವುದನ್ನು ಎಟಿಎಂ ಸಮೀಪವೇ ಬಾಡಿಗೆ ಮನೆಯಲ್ಲಿ ವಾಸವಿರುವ ಒಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುವಾಗ ಮೊಬೈಲ್‌ನ ್ಲಾಶ್‌ಲೈಟ್ ಆನ್ ಆಗಿದ್ದು, ಅದನ್ನು ನೋಡಿದ ಖದೀಮರು ಕಾಲ್ಕಿತ್ತಿದ್ದಾರೆ. ಅಷ್ಟರಲ್ಲಿ ಎಟಿಎಂ ದರೋಡೆ ದೃಶ್ಯವನ್ನು ವಿಡಿಯೋ ಮಾಡಿ, ಮತ್ತೊಂದು ಮೊಬೈಲ್‌ನಲ್ಲಿ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆರಳಚ್ಚು ತಜ್ಞರು ಸಾಕ್ಷ್ಯ ಸಂಗ್ರಹ ಮಾಡಿದ್ದು, ಸೂಲಿಬೆಲೆ ಪೊಲೀಸ್ ಇನ್‌ಸ್ಪೆಕ್ಟರ್ ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನಾಗೇಶ್, ನಾಗರಾಜ್, ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸ್ಥಳ ಪರಿಶೀಲಿಸಿದ್ದಾರೆ. ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐದು ತಂಡ ರಚನೆ
ಮಧ್ಯರಾತ್ರಿ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಎಟಿಎಂನಲ್ಲಿ ದರೋಡೆ ನಡೆಸಿ ಪರಾರಿಯಾಗಿರುವ ಮುಸುಕುಧಾರಿಗಳ ಚಲನವಲನಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಖದೀಮರ ಬಂಧನಕ್ಕೆ ಪೊಲೀಸರು 5 ತಂಡ ರಚನೆ ಮಾಡಿದ್ದಾರೆ. ಕಾರು ಆಂಧ್ರಪ್ರದೇಶ ನೋಂದಣಿ ಸಂಖ್ಯೆ ಆಗಿರುವುದರಿಂದ ಎಲ್ಲೆಲ್ಲಿ ಸಂಚಾರ ಮಾಡಿದೆ, ಯಾವ ಮಾರ್ಗದಲ್ಲಿ ಹೋಗಿದೆ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ,
ರಾತ್ರಿ ಸೆಕ್ಯೂರಿಟಿ ಇಲ್ಲ
ರಾಜ್ಯದಲ್ಲಿ ಎಟಿಎಂ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದು, ಖದೀಮರ ಚಲನವಲನ ಪತ್ತೆಹಚ್ಚುವುದು ಪೊಲೀಸರಿಗೆ ತಲೆನೋವಾಗಿದೆ. ಕಳವು ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ಎಚ್ಚೆತ್ತುಕೊಂಡಿದ್ದ ಸ್ಥಳೀಯ ಪೊಲೀಸರು 2 ತಿಂಗಳ ಹಿಂದಷ್ಟೇ ಬ್ಯಾಂಕ್‌ಗಳ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದ್ದರು. ಸೂಕ್ತ ಭದ್ರತೆ, ಸೈರನ್ ಸೇರಿ ಇನ್ನಿತರ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು. ಆದರೆ ಬ್ಯಾಂಕಿನಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗುತ್ತಿದೆ. ಸೈರನ್ ಆಗಲಿ, ಸೂಕ್ತ ಭದ್ರತೆಯನ್ನಾಗಲೀ ನಿಯೋಜಿಸಿರಲಿಲ್ಲ, ಬೆಳಗ್ಗೆ ಒಬ್ಬರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದ್ದು, ರಾತ್ರಿ ಪಾಳಿಗೆ ಯಾರನ್ನೂ ನಿಯೋಜಿಸಿರಲಿಲ್ಲ, ಸೂಲಿಬೆಲೆಯಲ್ಲಿ ಒಟ್ಟು ವಿವಿಧ ಬ್ಯಾಂಕ್‌ಗಳ ನಾಲ್ಕು ಎಟಿಎಂಗಳಿದ್ದು, ಯಾವುದಕ್ಕೂ ರಾತ್ರಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿಲ್ಲ.