3 ವರ್ಷದಲ್ಲಿ ನಿವೇಶನ, ಮನೆ ಕಲ್ಪಿಸಿ:  ರಾಜ್ಯ ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ

mysore
Published on

 ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಂದಿನ 3 ವರ್ಷಗಳಲ್ಲಿ ನಿವೇಶನ ಹಾಗೂ ಮನೆ ಕಲ್ಪಿಸಿಕೊಡಲು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಗುರುವಾರ ಸದನದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಖಾಸಗಿ ರಿಯಲ್ ಎಸ್ಟೇಟ್ ಮಾಡುವವರಿಗೆ ಮುಡಾ ಬೆಂಬಲ ಕೊಟ್ಟು ಅವರು ಶ್ರೀಮಂತರಾಗುತ್ತಿದ್ದಾರೆ. ಆದರೆ ಬಡವರಿಗೆ, ಮಧ್ಯಮ ವರ್ಗದವರಿಗೆ ನಿವೇಶನ, ಮನೆಗಳನ್ನು ಮಾಡುವುದರಲ್ಲಿ ಮುಡಾ ವಿಫಲವಾಗಿದೆ. ಅಂದಾಜು 90 ಸಾವಿರ ಜನ ನಿವೇಶನಕ್ಕಾಗಿ ಕಾಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಸ್ಥಳೀಯ ಸಂಸ್ಥೆಗಳಿಗೆ ಬಡಾವಣೆ ವರ್ಗಾವಣೆ ಮಾಡಿದ್ದರಿಂದ ಮುಡಾದಲ್ಲಿರುವ 21 ಇಂಜಿನಿಯರ್‌ಗಳಿಗೆ ಯಾವುದೇ ಕೆಲಸ ಇಲ್ಲ. ಅವರಿಗೆ ನೀರು ಕೊಡುವುದಾಗಲಿ, ಬಡಾವಣೆಗಳಿಗೆ ಅಭಿವೃದ್ಧಿ ಕೆಲಸ ಮಾಡುವ ಜವಾಬ್ದಾರಿ ಇಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಸರ್ಕಾರವು ಕೂಡ ಕೈಕಟ್ಟಿ ಕುಳಿತಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.

ನಾನು ಪ್ರತಿನಿಧಿಸುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18 ಗ್ರಾಮ ಪಂಚಾಯಿತಿ, 4 ಪಟ್ಟಣ ಪಂಚಾಯಿತಿ, 1 ನಗರ ಸಭೆ ಹಾಗೂ ಮಹಾನಗರ ಪಾಲಿಕೆಯ 5 ವಾರ್ಡ್‌ಗಳಿವೆ. ಆದರೆ ಪಟ್ಟಣ ಪಂಚಾಯಿತಿಗಳಲ್ಲಿ ಇಂಜಿನಿಯರ್‌ಗಳಿಲ್ಲದೆ ಸಾರ್ವಜನಿಕರ ಕೆಲಸಗಳು ಹಾಗೂ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಕೂಡಲೇ ಇಂಜಿನಿಯರ್‌ಗಳನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ದೇವರಾಜು ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಹೋರಾಟದ ಮೂಲಕ ದೇವರಾಜ ಅರಸು ನಾಲೆ, ವರುಣ ನಾಲೆ ಪ್ರಾರಂಭ ಮಾಡಿದ್ದರು. ನಂತರ ಕೆ.ಎನ್. ನಾಗೇಗೌಡ ನೀರಾವರಿ ಸಚಿವರಾಗಿ, ಅಂದು ಹಣಕಾಸು ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಬಾರಿಗೆ 300 ಕೋಟಿ ರೂ. ಅನುದಾನ ಕೊಟ್ಟು ನಾಲೆ ಮಾಡಿಸಿದ್ದು ರೈತರಿಗೆ ಅನುಕೂಲವಾಗಿತ್ತು.

ಆದರೆ, ಕಳೆದ 10 ವರ್ಷಗಳಿಂದ ಆ ಭಾಗಗಳ ನಾಲೆಗಳ ಮೂಲಕ ಮೈಸೂರು ತಾಲೂಕು ಹಾಗೂ ವರುಣ, ನಂಜನಗೂಡು, ಎಚ್.ಡಿ. ಕೋಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಎಷ್ಟೇ ಮನವಿ ಮಾಡಿದರೂ ಕೂಡ ಹಣ ನೀಡುತ್ತಿಲ್ಲ. ಕೆ.ಆರ್.ಎಸ್ ಮುಳುಗಡೆ ಆಗಿರುವ ಚಾಮುಂಡೇಶ್ವರಿ ಕ್ಷೇತ್ರದ ಹಳ್ಳಿಗಳ ಖುಷ್ಕಿ ಪ್ರದೇಶ ಕೆ.ಆರ್.ಎಸ್ ಪಕ್ಕದಲ್ಲಿ ಇದ್ದರೂ ಕೂಡ ಬೋರ್‌ವೆಲ್‌ನಲ್ಲಿ ನೀರಿಲ್ಲ.

ಏತ ನೀರಾವರಿ ಯೋಜನೆಗಳನ್ನು ಮಾಡುತ್ತಿದ್ದಾರೆ. ಆದರೆ ಕೆಲಸಗಳೂ ಇನ್ನೂ ಪೂರ್ಣವಾಗಿಲ್ಲ. ಖುಷ್ಕಿ ಪ್ರದೇಶಗಳಿಗೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net