3 ವರ್ಷಗಳಲ್ಲಿ ಮೈಸೂರು,ನಾಗನಹಳ್ಳಿ ಟರ್ಮಿನಲ್ ಕಾಮಗಾರಿ ಪೂರ್ಣ

17
Published on

ಮೈಸೂರು: 493 ಕೋಟಿ ರೂ. ವೆಚ್ಚದಲ್ಲಿ ಮೈಸೂರು ನಿಲ್ದಾಣ ಹಾಗೂ ನಾಗನಹಳ್ಳಿ ಟರ್ಮಿನಲ್ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.


ನಗರದ ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದರು.


ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ಯೋಜನೆಗೆ ಅನುದಾನಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಭೂ ಸ್ವಾಧೀನಕ್ಕಾಗಿ ಹೆಚ್ಚಿನ ಅನುದಾನ ಅಗತ್ಯವಿದೆ. ಆದ್ದರಿಂದ ಇದನ್ನು ಸರಿದೂಗಿಸಲು ರೈಲ್ವೆ ಸಿಬ್ಬಂದಿ ವಸತಿ ಗೃಹಗಳನ್ನು ತೆರವುಗೊಳಿಸಿ ಮೈಸೂರಿನಲ್ಲಿ 3 ರನ್ನಿಂಗ್, 4 ಸ್ಟಾಬಲ್, 4 ಪಿಟ್ ಲೇನ್ ಹಾಗೂ 1 ಶಂಟಿಂಗ್ ನೆಕ್ ಸ್ಥಾಪಿಸಲಾಗುತ್ತಿದೆ. ನಾಗನಹಳ್ಳಿಯಲ್ಲೂ ತಲಾ ಒಂದು ರನ್ನಿಂಗ್, ಪಿಟ್, ಸ್ಟಾಬಲ್ ಲೇನ್ ನಿರ್ಮಿಸಲಾಗುತ್ತಿದೆ. ಒಂದು ಮೆಮು ಷೆಡ್ ನಿರ್ಮಾಣಕ್ಕೆ 7 ಎಕರೆಯನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರು-ಬೆಂಗಳೂರು ದಶಪಥ ಹಾಗೂ ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣದ ಆಶ್ವಾಸನೆಯನ್ನು ಜನರಿಗೆ ನೀಡಿದ್ದರು. ಕರೊನಾ ಕಾರಣ ಎಲ್ಲ ಕೆಲಸಗಳು ನನೆಗುದಿಗೆ ಬಿದ್ದಿದ್ದವು. ರೈಲು ಹಾಗೂ ವಿಮಾನ ನಿಲ್ದಾಣ ವಿಸ್ತರಣೆಗಾಗಿ ರಾಜ್ಯ ಸರ್ಕಾರಕ್ಕೆ ಅನುದಾನ ಕೋರಲಾಗಿತ್ತು. ಹಣಕಾಸಿನ ಕೊರತೆಯಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣ ವಿಸ್ತರಣೆಗೆ ಮಾತ್ರ 319 ಕೋಟಿ ರೂ. ನೀಡಿದ್ದರು ಎಂದು ವಿವರಿಸಿದರು.


ನಗರದಲ್ಲಿ ಗತಿಶಕ್ತಿ ಕಚೇರಿ ಸ್ಥಾಪನೆಯಾಗಿದ್ದು, 17 ರೈಲ್ವೆ ಕಾಮಗಾರಿ ನಡೆಯುತ್ತಿವೆ. ಬೆಂಗಳೂರಿನ ಯಶವಂತಪುರ, ಬೈಯಪ್ಪನಹಳ್ಳಿ ಟರ್ಮಿನಲ್ ಮಾದರಿಯಲ್ಲಿ ಮೈಸೂರಿನ ಯಾದವಗಿರಿಯಲ್ಲೂ ಟರ್ಮಿನಲ್ ನಿರ್ಮಿಸಲಾಗುವುದು. ಬೆಳಗೊಳದಲ್ಲಿ 4 ಸೆಬ್ಲಿಂಗ್ ಲೇನ್, 4 ಪಿಟ್ ಲೇನ್, ಅಶೋಕಪುರಂನಲ್ಲಿ ಮೂರು ಹೊಸ ಪ್ಲಾಟ್‌ಫಾರ್ಮ್, 2 ಸ್ಟೆಬ್ಲಿಂಗ್ ಲೇನ್ ಮಾಡಲಾಗುತ್ತಿದೆ. ಪಾದಚಾರಿ ಸೇತುವೆ ಕೂಡ ನಿರ್ಮಿಸಲಾಗುವುದು ಎಂದು ತಿಳಿಸಿದರು


ನಗರದ ಮುಖ್ಯ ರೈಲು ನಿಲ್ದಾಣ ಸೇರಿದಂತೆ ಅಶೋಕಪುರಂ, ನಾಗನಹಳ್ಳಿ, ಬೆಳಗೊಳ, ಕಡಕೊಳ ರೈಲ್ವೆ ನಿಲ್ದಾಣಗಳನ್ನು ಮೇರ್ಲ್ದಜೆಗೇರಿಸಲಾಗುವುದು. ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸುವ ದೂರದೃಷ್ಟಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.


ಅಶೋಕಪುರಂ ನಿಲ್ದಾಣ ನವೀಕರಣಕ್ಕೆ ಮೊದಲ ಹಂತದಲಿ ್ಲ15.17 ಕೋಟಿ ರೂ., 2ನೇ ಹಂತದಲ್ಲಿ 13.39 ಕೋಟಿ ರೂ. ಬಿಡುಗಡೆಯಾಗಲಿದೆ. 2023ರ ಜೂನ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 3 ಪ್ಲಾಟ್‌ಫಾರ್ಮ್ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ 5,310 ಚ.ಮೀ. ಸರ್ಕಾರಿ ಭೂಮಿ ಹಾಗೂ 344 ಚ.ಮೀ. ಖಾಸಗಿ ಭೂಮಿ ಬೇಕಿದ್ದು, ಜಿಲ್ಲಾಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.


ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಇ.ವಿಜಯಾ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net