3 ಪಕ್ಷದಿಂದ ಜಿಲ್ಲೆಯಲ್ಲಿ ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್ ನೀಡಲಿ

3 ಪಕ್ಷದಿಂದ ಜಿಲ್ಲೆಯಲ್ಲಿ ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್ ನೀಡಲಿ
Published on

ಹಾಸನ : ಜಿಲ್ಲೆಯಲ್ಲಿ ವೀರಶೈವ-ಲಿಂಗಾಯಿತ ಸಮುದಾಯದ ಮೂರು ಲಕ್ಷ ಜನರಿದ್ದಾರೆ. ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಸೇರಿ ಮೂರು ಪಕ್ಷಗಳು ನಮ್ಮ ಜನಾಂಗದ ಅಭ್ಯರ್ಥಿ ಕಣಕ್ಕೆ ಇಳಿಸಲಿ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಚೇತನ್ ಗೆಂಡೇಹಳ್ಳಿ ಕೋರಿದರು.

ಹಾಸನ ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಸುಮಾರು ಮೂರು ಲಕ್ಷ ಜನ ಮತದಾರರು ಇದ್ದಾರೆ. ಏಳು ಕ್ಷೇತ್ರದಲ್ಲಿ ಸಕಲೇಶಪುರ ಮೀಸಲು ಕ್ಷೇತ್ರ ಹೊರತುಪಡಿಸಿ ಇನ್ನು ಉಳಿದ ಆರು ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯದವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ. ಚುನಾವಣೆಯಲ್ಲಿ ನಮ್ಮ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ನೀಡದೆ ಸಮುದಾಯವನ್ನು ಕಡೆಗಣಿಸಿ ವಂಚನೆ ಮಾಡುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರಿಂದ ಕಾಂಗ್ರೆಸ್ ಪಕ್ಷವನ್ನು ಕೇಳುತ್ತಿದ್ದೇವೆ. ಇತರೆ ಪಕ್ಷದವರು ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಾಪಂ, ಜಿಪಂ ಸೇರಿದಂತೆ ಗ್ರಾಂಪಂಯಲ್ಲಿ ನಮ್ಮ ಸಮುದಾಯವನ್ನು ಪರಿಗಣಿಸಬೇಕು. ಮೂರು ರಾಷ್ಟ್ರೀಯ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ ಮೂರ್ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧಿಸಲು ವೀರಶೈವ ಲಿಂಗಾಯಿತ ಸಮುದಾಯದ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬೇಲೂರು ತಾಲೂಕು ಪುರಸಭೆ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ತತ್ವಗಳ ಅಡಿಯಲ್ಲಿ ಸಮುದಾಯಕ್ಕೆ ಒಂದು ಅವಕಾಶ ನೀಡಬೇಕೆಂದು ಹಿಂದಿನಿಂದಲೂ ಕೇಳುತ್ತ ಬಂದಿದ್ದೇವೆ. ಕಾಂಗ್ರೆಸ್ ನಮ್ಮ ಸಮುದಾಯದ ಕಡೆಗಿನ ಒಲವು ಕಡಿಮೆಯಾಗಿದೆ. ಲಿಂಗಾಯಿತ ಸಮುದಾಯವು ಕಾಂಗ್ರೆಸ್‌ಗೆ ಹೆಚ್ಚು ಬೆಂಬಲ ನೀಡುತ್ತಾ ಬಂದಿದೆ. ಇತರೆ ಪಕ್ಷದವರು ನಮ್ಮ ಸಮುದಾಯಕ್ಕೆ ಆದ್ಯತೆ ನೀಡುತ್ತಿರುವುದರಿಂದ ಸಮಾಜದವರು ಇತರೆ ಪಕ್ಷದತ್ತ ಮನಸ್ಸು ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಸಮುದಾಯ ಬೇರೆ ಪಕ್ಷಕ್ಕೆ ಹೋಗುವುದನ್ನು ತಡೆಯುವುದಕ್ಕೆ ಕಾಂಗ್ರೆಸ್ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಹೆಚ್ವು ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಸವರಾಜು, ವೀರಶೈವ- ಲಿಂಗಾಯಿತ ಮುಖಂಡ ಹರೀಶ್, ಬೇಲೂರಿನ ಭರತ್, ಯತೀಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net