3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
Published on


ಚನ್ನರಾಯಪಟ್ಟಣ: ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಮಾಳೆಕೊಪ್ಪಲು ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ಮಾಳೆಕೊಪ್ಪಲು ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, 2 ನೇ ಹಂತದಲ್ಲಿ ಗ್ರಾಮದ ಪರಿಮಿತಿಯ ಬೀದಿಗಳಿಗೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುವುದು ಎಂದರು.


ಮಾಳೆಕೊಪ್ಪಲು ಗ್ರಾಮದಿಂದ ಗುಲಸಿಂದ ವರಗಿನ ರಸ್ತೆಯನ್ನು ಸೇತುವೆ ನಿರ್ಮಾಣದೊಂದಿಗೆ 9 ಮೀಟರ್ ನಷ್ಟು ಅಗಲೀಕರಣ ಗೊಳಿಸಲಾಗುವುದು. ಸದ್ಯಕ್ಕೆ ಡಿವೈಡರ್ ನಿರ್ಮಾಣಕ್ಕೆ ಅನುಮತಿ ಇಲ್ಲ. ಸ್ಥಳೀಯರ ಒತ್ತಾಯದ ಹಿನ್ನೆಲೆ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.


ತಾಲೂಕಿನ ಗಡಿಭಾಗದ ಬಹುತೇಕ ಗ್ರಾಮಗಳಿಗೆ ಸಾರಿಗೆ ಬಸ್ ಸಂಚಾರಕ್ಕೆ ಕಳೆದ ವಾರ ಚಾಲನೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉಳಿದಿರುವ ಗಡಿ ಗ್ರಾಮಗಳನ್ನು ಗುರುತಿಸಿ ಸಾರಿಗೆ ಬಸ್ ಸಂಚಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆಯೇ ಬಸ್ ಸಂಚಾರ ಮಾರ್ಗಗಳನ್ನು ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.


ಪೂರ್ವ ಮುಂಗಾರಿನಿಂದಲೂ ಮಳೆ ಅಬ್ಬರಿಸಿದ ಪರಿಣಾಮ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು ಡಿಂಕಾ ಸೇರಿದಂತೆ ಹಲವೆಡೆ ಮಳೆ ನೀರಿನ ರಭಸಕ್ಕೆ ಸಿಲುಕಿ ಸೇತುವೆಗಳು ಸಹ ಕೊಚ್ಚಿ ಹೋಗಿದ್ದವು. ಈಗಾಗಲೇ ಅವುಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.


ಎಪಿಎಂಸಿ ಮಾಜಿ ಅಧ್ಯಕ್ಷ ಮಂಜೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್, ಉಮೇಶ್, ಗವೀಶ್, ಅಣ್ಣೇಗೌಡ, ಮಂಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net