

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೈಕ್ ಏರಿ ಒಂಟಿಯಾಗಿ ಸರ ಕಳವು ಮಾಡುತ್ತಿದ್ದ ಕುಖ್ಯಾತ ಸರಗಳ್ಳನಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ 41ನೇ ಎಸಿಎಂಎಂ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿ ಅಚ್ಯುತ್ ಕುಮಾರ್ ಗಣಿ ಅಲಿಯಾಸ್ ವಿಶ್ವನಾಥ್ ಕೋಳಿವಾಡ ಶಿಕ್ಷೆಗೆ ಗುರಿಯಾದವ. ಪಲ್ಸರ್ ಬೈಕಿನಲ್ಲಿ ಒಂಟಿಯಾಗಿ ಬರುತ್ತಿದ್ದ ಅಚ್ಯುತ್, ನಗರದ ಎಲ್ಲೆಡೆ ಸುತ್ತಾಡಿ ಏಳೆಂಟು ಮಹಿಳೆಯರ ಸರ ಕದ್ದು, ಆನಂತರ ನಗರದಿಂದ ಹೊರಹೋಗುತ್ತಿದ್ದ. ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ.
2018ರ ಜೂನ್ನಲ್ಲಿ ಕಳ್ಳತನಕ್ಕೆ ಬಂದಾಗ ಜ್ಞಾನಭಾರತಿ ಠಾಣೆ ಕಾನ್ಸ್ಟೇಬಲ್ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಆಗಿನ ಇನ್ಸ್ಪೆಕ್ಟರ್ ಜೆ.ವೈ.ಗಿರಿರಾಜ್, ಆರೋಪಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ನಗರದಲ್ಲಿ ನಡೆದಿದ್ದ 105 ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಒಟ್ಟಾರೆ 3.5 ಕೆಜಿಯಷ್ಟು ಚಿನ್ನಾಭರಣ ಜಪ್ತಿ ಮಾಡುವಲ್ಲಿ ಪೊಲೀಸರ ತಂಡ ಯಶಸ್ವಿ ಆಗಿತ್ತು. ಈ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಈ ಪೈಕಿ ಸರ್ಜಾಪುರ ರಸ್ತೆ ಗ್ರಾಂಡ್ ಅಪಾರ್ಟ್ಮೆಂಟ್ ಎದುರು ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪ್ರಿನ್ಸ್ ಶಿವದಾಸ್ ಅವರ ಸರ ಕಳವು ಮಾಡಿದ್ದ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ 41ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಎಸ್.ಎಸ್.ಭರತ್ ಅವರು, ವಾದ ಮತ್ತು ಪ್ರತಿವಾದ ಆಲಿಸಿ ಅಪರಾಧಿ ಅಚ್ಯುತ್ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಿರಿಯ ಸಹಾಯಕ ಅಭಿಯೋಜಕರಾದ ಜಿ.ತಾರಾನಾಥ ಪೊಲೀಸರ ಪರ ವಾದ ಮಂಡಿಸಿದ್ದರು.